ಮುಸ್ಲಿಂ ವ್ಯಾಪಾರಿಯೋರ್ವ ರೊಟ್ಟಿ ತಯಾರಿಸುವ ವೇಳೆ ಅದನ್ನು ತಂದೂರ್ನಲ್ಲಿ ಇಡುವ ಮುಂಚೆ ಅದಕ್ಕೆ ಉಗಿಯುತ್ತಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ರಾಮ, ಶಬರಿಗೆ ಹೋಲಿಕೆ ಮಾಡಿ ಬಾಲಿವುಡ್ ನಟ ಸೋನು ಸೂದ್ ಸಮರ್ಥಿಸಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ವ್ಯಾಪಾರಿಯೊಬ್ಬ ಗ್ರಾಹಕರಿಗೆ ರೊಟ್ಟಿಗಳನ್ನು ತಯಾರಿಸುವ ವೀಡಿಯೋವನ್ನು ನೆಟ್ಟಿಗರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ವೀಡಿಯೋದಲ್ಲಿ, ರೊಟ್ಟಿ ತಯಾರಿಸುವಾಗ ಆ ವ್ಯಕ್ತಿ ಅದರ ಮೇಲೆ ಉಗುಳುವ ದೃಶ್ಯವಿದೆ.
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಇರುವ ಅಂಗಡಿಗಳ ಮಾಲೀಕರು ತಮ್ಮ ಹೆಸರಿನ ಬೋರ್ಡ್ಗಳನ್ನು ಪ್ರದರ್ಶಿಸಬೇಕು ಎಂಬ ಪೊಲೀಸರ ಆದೇಶಕ್ಕೆ ಸೋನು ಸೂದ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಗೆ ಟಾಂಗ್ ಕೊಡಲು ಕೆಲವರು ಮುಸ್ಲಿಂ ವ್ಯಾಪಾರಿಗೆ ಸಂಬಂಧಿಸಿದ ವೀಡಿಯೋವನ್ನು ನೆಟ್ಟಿಗರು ಹರಿಬಿಟ್ಟಿದ್ದರು. ‘ಹಿಟ್ಟಿನ ಮೇಲೆ ಉಗುಳಿ ತಯಾರಿಸುವ ರೊಟ್ಟಿಯನ್ನು ಸೋನು ಸೂದ್ ಅವರಿಗೆ ಪಾರ್ಸೆಲ್ ಕಳುಹಿಸಬೇಕು. ಆದ್ದರಿಂದ ಸಹೋದರತ್ವವು ಹಾಗೆಯೇ ಉಳಿಯುತ್ತದೆ’ ಎಂದು ನೆಟ್ಟಿಗರು ಟಾಂಗ್ ನೀಡಿದ್ದಾರೆ.
ಇದಕ್ಕೆ ಪತ್ಯುತ್ತರ ನೀಡಿರುವ ಸೋನು ಸೂದ್, ನಮ್ಮ ಶ್ರೀರಾಮ ಅವರು ಶಬರಿಯ ಎಂಜಲು ಹಣ್ಣುಗಳನ್ನು ತಿಂದಿದ್ದಾರೆ. ಹಾಗಾದರೆ ನಾನು ರೊಟ್ಟಿಗಳನ್ನು ಏಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು ನನ್ನ ಸಹೋದರ. ಮಾನವೀಯತೆ ಹಾಗೇ ಉಳಿಯಬೇಕು. ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.