ಬೆಳಗಾವಿ ;- ರಾಷ್ಟ್ರೀಯ ಶಿಕ್ಷಣ ನೀತಿ ಕಿತ್ತೆಸೆದು, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತೇವೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ನಮ್ಮ ರಾಜ್ಯದಲ್ಲಿ ಮಾತ್ರ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗಿದೆ. ಅದಕ್ಕೆ ಬಹಳಷ್ಟು ಪೂರ್ವ ತಯಾರಿ ಆಗಬೇಕಿತ್ತು ಮತ್ತು ಅದರಲ್ಲಿ ಕೆಲ ನ್ಯೂನತೆಗಳಿವೆ ಎಂದರು.
ಈ ಎಲ್ಲ ವಿಚಾರಗಳ ಬಗ್ಗೆ ವಿವರವಾಗಿ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸುತ್ತಿದ್ದೇವೆ. ಯಾವುದೇ ರೀತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ, ಯಾವ ರೀತಿಯಲ್ಲಿ ಬದಲಾವಣೆ ತರಬೇಕೆಂದು ಬಹಳಷ್ಟು ಗಮನಹರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟವಾದ ರೂಪವನ್ನು ಕೊಟ್ಟು ಬದಲಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನ್ಯೂನತೆಗಳು ಏನೇನಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಶಿಕ್ಷಣ ನೀತಿಯಲ್ಲಿ ಬೇರೆ ಬೇರೆ ಅವಿಷ್ಕಾರಗಳಿವೆ ಎಂದು ತಿಳಿಸಿದರು.
ಯಾವುದೇ ನೀತಿ ಜಾರಿಗೆ ತರಬೇಕಾದರೆ ಮೂಲಭೂತ ಸೌಲಭ್ಯಗಳು ಇರಬೇಕು. ಅದಕ್ಕೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಅನುದಾನ ಒದಗಿಸುವ ಬಗ್ಗೆ ತಯಾರಿ ಮಾಡಬೇಕಾಗುತ್ತದೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಒಂದು ರೀತಿ ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತೊಂದು ರೀತಿ ಆಗುತ್ತದೆ. ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತೇವೆ ಎಂದು ಹೇಳಿದರು.