ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಭಯಾನಕ ಸ್ಫೋಟ ನಡೆಸಲು ಸಜ್ಜಾಗಿದ್ದ ಐವರು ಶಂಕಿತ ಉಗ್ರರನ್ನ ಸಿಸಿಬಿ ಅರೆಸ್ಟ್ ಮಾಡಿದ್ದು ಈಗ ಸಿಸಿಬಿ ಅಧಿಕಾರಿಗಳು ಐವರು ಶಂಕಿತ ತನಿಖೆ ಶುರುಮಾಡಿದೆ. ಆದರೆ ತನಿಖೆ ವೇಳೆ ಭಯಾನಕ ಸ್ಪೋಟಕ ಅಂಶಗಳು ಹೊರಬಿದ್ದಿದೆ.
ಹಣದ ಮೂಲ. ಹಾಗು ಸಿಕ್ಕ ಜೀವಂತ ಗುಂಡುಗಳು ಬೇರೆಯದ್ದೆ ಕಥೆ ಹೇಳುತ್ತಿವೆ. ಹೌದು.. ಸಿಸಿಬಿ ಕೈಯಲ್ಲಿ ಲಾಕ್ ಆಗಿರುವ ಕ್ರಿಮಿಗಳ ಬಳಿ 45 ಜೀವಂತ ಗುಂಡು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್ಗಳು ಸಿಕ್ಕಿವೆ. ಇವುಗಳನ್ನೆಲ್ಲ ಖರೀದಿಸಲು ಖುದ್ದು ಎ2 ಆರೋಪಿ ಮಹಮ್ಮದ್ ಜುನೈದ್ ವಿದೇಶದಲ್ಲಿ ಕುಳಿತು ಫಂಡ್ ಕೊಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.
ಮೊಬೈಲ್ ಬಳಸಲು ಸಾಧ್ಯವಿಲ್ಲದ ಕಡೆ ಉಗ್ರರು ವಾಕಿಟಾಕಿ (Walkie-Talkie) ಬಳಕೆ ಮಾಡುತ್ತಾರೆ. ಕಾಡಿನಲ್ಲಿ ತರಬೇತಿ (Forest Training) ನಡೆಸುವಾಗ ವಾಕಿಟಾಕಿ ಬಳಕೆ ಮಾಡಲಾಗುತ್ತದೆ. ಒಂದು ವೇಳೆ ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಕಟ್ಟಡಗಳ ಮೇಲೆ ದಾಳಿ ಮಾಡಿದಾಗ ಜಾಮರ್ ಬಳಕೆ ಮಾಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಮೊಬೈಲ್ ಸಿಗ್ನಲ್ಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ವೇಳೆ ವಾಕಿಟಾಕಿ ಬಳಕೆ ಮಾಡಲಾಗುತ್ತದೆ.
2017 ರಲ್ಲಿ ಕೊಲೆ ಕೇಸ್ ಬಳಿಕ 2020ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಎರಡು ಬಾರಿ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್, 2021ರಲ್ಲಿ ಜೈಲಿಂದ ರಿಲೀಸ್ ಆದ್ಮೇಲೆ ನಾಪತ್ತೆಯಾಗಿದ್ದ. ಈಗ ವಿದೇಶದಲ್ಲಿ ಕುಳಿತು ಉಗ್ರವಾದಕ್ಕೆ ಮಸಲತ್ತು ಆತಂಕ ಮೂಡಿಸಿದೆ.. ಶಸ್ತ್ರಾಸ್ತ್ರ ಖರೀದಿಗೆ ಹಣ ಕೊಡುತ್ತಿದ್ದು, ಈ ಪಿಸ್ತೂಲ್, ಗುಂಡುಗಳು ಗುಜರಾತ್ ಮತ್ತು ಉತ್ತರ ಪ್ರದೇಶದಿಂದ ಬಂದಿರಬಹುದು ಎಂಬ ಮಾಹಿತಿ ಇದೆ.
ಸದ್ಯ ಸಿಸಿಬಿ ಅಧಿಕಾರಿಗಳು ಶಂಕಿತ ಉಗ್ರರ ಅಸಲಿ ಪ್ಲ್ಯಾನ್ ಏನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎನ್ಐಎ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಮುಂದಿನ ಹಂತರದಲ್ಲಿ ಎನ್ಐಎ ತನಿಖೆ ನಡೆಸುವ ಸಾಧ್ಯತೆಗಳಿವೆ.