ಸಿಯೋಲ್ : ಕಳೆದ ವಾರ ದಕ್ಷಿಣ ಕೊರಿಯಾ ದೇಶದಲ್ಲಿ ಮಿಲಿಟರಿ ಆಡಳಿತ ಘೋಷಿಸಲಾಗಿತ್ತು. ಆದ್ರೆ ಮಿಲಿಟರಿ ಆದೇಶ ಘೋಷಿಸುತ್ತಿದ್ದಂತೆ ತೀವ್ರ ಆಕ್ರೋಶ ಎದುರಾದ ಕಾರಣ ಘೋಷಿಸಿದ ಆರೇ ಗಂಟೆಯಲ್ಲಿ ಹಿಂಪಡೆಯಲಾಗಿತ್ತು. ಬಳಿಕ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ವಿರುದ್ಧ ತನಿಖೆ ನಡೆಸುತ್ತಿರುವಂತೆಯೇ ಭ್ರಷ್ಟಾಚಾರ ತನಿಖಾ ದಳ ಅಧ್ಯಕ್ಷರ ಮೇಲೆ ಪ್ರಯಾಣ ನಿಷೇಧ ಆದೇಶ ಹೊರಡಿಸಿದೆ.
ಮಿಲಿಟರಿ ಕಾನೂನು ಜಾರಿ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಅಧ್ಯಕ್ಷರು ರದ್ದುಗೊಳಿಸಿದ್ದರೂ ಅವರ ವಿರುದ್ಧ ದಾಖಲಾಗಿರುವ ದಂಗೆಯ ಆರೋಪಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಸಂಸತ್ನಲ್ಲಿ ಅಧ್ಯಕ್ಷರನ್ನು ದೋಷಾರೋಪಣೆಗೆ ಗುರಿಪಡಿಸುವ ವಿರೋಧ ಪಕ್ಷಗಳ ನಿರ್ಣಯ ವಿಫಲವಾಗಿದ್ದು ಈ ವಾರ ಮತ್ತೊಂದು ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.