ನವದೆಹಲಿ: ವಿಶೇಷ ಭದ್ರತಾ ಪಡೆ (SPG) ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ (Arun Kumar Sinha) ಅವರು ನಿಧನರಾಗಿದ್ದಾರೆ. 61 ವರ್ಷದ ಸಿನ್ಹಾ ಅವರು ಕಳೆದ ಕೆಲ ತಿಂಗಳಿನಿಂದ ಕಿಡ್ನಿ (Kidney) ಸಂಬಂಧಿತ ಕಾಯಿಲೆಯಿಂದ ಬಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಹರಿಯಾಣದ ಗುರುಗ್ರಾಮ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸಿನ್ಹಾ ಅವರು 1987ರ ಬ್ಯಾಚ್ ಕೇರಳ (Kerala) ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಆ ಬಳಿಕ 2016 ರಿಂದ ಎಸ್ಪಿಜಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಇತ್ತೀಚೆಗಷ್ಟೇ ಅವರ ಸೇವೆ ವಿಸ್ತರಣೆ ಮಾಡಲಾಗಿತ್ತು. ಸಿನ್ಹಾ ಅವರು ಎಸ್ಪಿಜಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ವಿಶೇಷ ಸೇವೆ ಮತ್ತು ಸಂಚಾರ) ಆಗಿದ್ದರು.