ಅಯೋಧ್ಯಾ: ಶ್ರೀರಾಮ ಜನ್ಮಭೂಮಿಯಾದ ಉತ್ತರಪ್ರದೇಶದ ಅಯೋಧ್ಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮ ಮಂದಿರದ ಆವರಣದಲ್ಲಿಇರಿಸಲಾಗಿರುವ ಶ್ರೀರಾಮ ಲಲ್ಲಾನ ಮೂರ್ತಿಗೆ 155 ದೇಶಗಳ ಪವಿತ್ರ ನದಿಗಳಿಂದ ಸಂಗ್ರಹಿಸಲಾಗಿರುವ ನೀರಿನಲ್ಲಿ ಭವ್ಯ ಅಭಿಷೇಕವನ್ನು ನಡೆಸಲಾಗುವುದು.
ಏ. 23ರಂದು ಈ ಕಾರ್ಯವನ್ನು ಸಿಎಂ ಯೋಗಿ ಆದಿತ್ಯನಾಥ್ ನೆರವೇರಿಸಲಿದ್ದಾರೆ. ಅಭಿಷೇಕಕ್ಕೂ ಮುನ್ನ ಮಣಿರಾಮ್ ದಾಸ್ ಛಾವ್ನಿ ಆಡಿಟೊರಿಯಂನಲ್ಲಿ ನಡೆಯುವ ‘ಜಲ ಕಲಶ’ ಪೂಜೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಲಿದ್ದಾರೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ದಿಲ್ಲಿ ಬಿಜೆಪಿ ನಾಯಕ ವಿಜಯ್ ಜಾಲಿ ಹಾಗೂ ರಾಮ ಭಕ್ತರ ತಂಡವೊಂದು ಪವಿತ್ರ ಜಲಗಳಿರುವ ಕಲಶಗಳನ್ನು ಏ. 23 ರಂದು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ನೀಡಲಿದೆ. ಅವರು ಅಭಿಷೇಕ ಮಾಡಲಿದ್ದಾರೆ. ಸಾವಿರಾರು ಭಕ್ತರು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರತಿ ಕಲಶದ ಮೇಲೆಯೂ ಆಯಾ ನದಿ ಹಾಗೂ ನದಿ ಇರುವ ದೇಶದ ಬಾವುಟ ಸ್ಟಿಕ್ಕರ್ ಹಚ್ಚಲಾಗಿದೆ. ಚೀನಾ, ರಷ್ಯಾ, ಕೆನಡಾ, ಟಿಬೆಟ್ ಸೇರಿ ಹಲವು ರಾಷ್ಟ್ರಗಳ ನದಿಯ ನೀರು ಸಂಗ್ರಹಿಸಲಾಗಿದೆ ಎಂದಿದ್ದಾರೆ.
ಅಯೋಧ್ಯೆಯ ಭವ್ಯ ರಾಮ ಮಂದಿರದ ಪ್ರಾಕಾರ ನಿರ್ಮಾಣ ಕಾರ್ಯವು 2023ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. 2024ರ ಸಂಕ್ರಾಂತಿಗೆ ನೂತನ ಮಂದಿರದಲ್ಲಿ ರಾಮನ ದರ್ಶನವನ್ನು ಭಕ್ತರು ಮಾಡಬಹುದು ಎಂದು ಟ್ರಸ್ಟ್ನ ಸದಸ್ಯರು ತಿಳಿಸಿದ್ದಾರೆ.
ಸಿಂಘಾಲ್, ಮೋದಿ ಪ್ರೇರಣೆ ಅಭಿಷೇಕದ ಉಸ್ತುವಾರಿ ಹೊತ್ತಿರುವ ದಿಲ್ಲಿ ಬಿಜೆಪಿ ನಾಯಕ ವಿಜಯ್ ಜಾಲಿ ಅವರು ಮಾತನಾಡಿ, ”2020ರಲ್ಲಿ ದಿಲ್ಲಿ ಸ್ಟಡಿ ಗ್ರೂಪ್ ಎಂಬ ಎನ್ಜಿಒ ಮೂಲಕ ಪವಿತ್ರ ಜಲದ ಸಂಗ್ರಹಣೆ ಶುರು ಮಾಡಲಾಯಿತು. ಈ ಕಾರ್ಯಕ್ಕೆ ವಿಶ್ವ ಹಿಂದೂ ಪರಿಷತ್ನ ವರಿಷ್ಠ ಅಶೋಕ್ ಸಿಂಘಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸ್ಫೂರ್ತಿ. ಪಾಕಿಸ್ತಾನದ ರಾವಿ ನದಿಯ ನೀರನ್ನು ಅಲ್ಲಿಂದ ಕೆಲವರು ದುಬೈಗೆ ಕಳುಹಿಸಿಕೊಟ್ಟರು. ಬಳಿಕ ಭಾರತಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ರಾಮ ಮಂದಿರದ ಮುಖ್ಯ ಕಟ್ಟಡಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಎತ್ತರದವರೆಗೆ ವಿಶೇಷವಾದ ರಾಜಸ್ಥಾನದ ಬನ್ಸಿ ಪಹರ್ಪುರ್ ಕಲ್ಲುಗಳನ್ನು ಬಳಸಲಾಗುತ್ತಿದೆ. 1,200 ಶಿಲ್ಪಿಗಳನ್ನು ಈ ಕಲ್ಲುಗಳನ್ನು ಕೆತ್ತನೆ ಮಾಡುತ್ತಿದ್ದು, ಈ ವರ್ಷದ ಡಿಸೆಂಬರ್ನೊಳಗೆ ಕೆಲಸ ಮುಗಿಸುವಂತೆ ಸೂಚಿಸಲಾಗಿದೆ.