ಬೆಂಗಳೂರು: ನಗರದ ರೇಷ್ಮೆ ಸಂಸ್ಥೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಗದಿಂದ ನಡೆಯುತ್ತಿದ್ದು, ಈಗಾಗಲೇ ಶೇ. 25ರಷ್ಟು ಕಾಮಗಾರಿ ಮುಕ್ತಾಯವಾಗಿದೆ. 2025ರ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.
58.19 ಕಿ.ಮೀ. ಮಾರ್ಗದಲ್ಲಿ ಒಟ್ಟು 30 ನಿಲ್ದಾಣಗಳು ತಲೆ ಎತ್ತಲಿವೆ. ಈ ಎಲ್ಲಾ ನಿಲ್ದಾಣಗಳು ಎತ್ತರಿಸಿದ ನಿಲ್ದಾಣವಾಗಿರುವುದರಿಂದ ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ. ಈಗಾಗಲೇ ಶೇ. 25ರಷ್ಟು ಕಾಮಗಾರಿ ಮುಕ್ತವಾಗಿದೆ ಎನ್ನುತ್ತಾರೆ ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು.
ಕಾಮಗಾರಿ ಎರಡು ಹಂತದಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ರೇಷ್ಮೆ ಸಂಸ್ಥೆಯಿಂದ-ಕೆ. ಆರ್. ಪುರವರೆಗೆ ( 13 ನಿಲ್ದಾಣ), ಎರಡನೇ ಹಂತದಲ್ಲಿ ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ (17 ನಿಲ್ದಾಣ) ಕಾಮಗಾರಿ ನಡೆಯತ್ತಿದೆ.
ಕಾಮಗಾರಿಯ ಪ್ರಗತಿ
ರೇಷ್ಮೆ ಸಂಸ್ಥೆಯಿಂದ -ಕೋಡಿ ಬೀಸನಹಳ್ಳಿವರೆಗೆ (ದೇವರಬೀಸನಹಳ್ಳಿ) ಶೇ. 40 ರಷ್ಟು ಪಿಲ್ಲರ್ ಕಾಮಗಾರಿ ಪೂರ್ಣಗೊಂಡಿದ್ದು, ಶೇ.14 ಯು-ಗರ್ಡರ್ ಅಳವಡಿಸಲಾಗಿದೆ. ಕೋಡಿಬೀಸನಹಳ್ಳಿಯಿಂದ ಕೆ.ಆರ್.ಪುರದವರೆಗೆ ಶೇ.80ರಷ್ಟು ಪಿಲ್ಲರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶೇ.32ರಷ್ಟು ಯು ಗರ್ಡರ್ ಕೂಡ ಅಳವಡಿಸಲಾಗಿದೆ. ಶೇ. 60ರಷ್ಟು ಪಿಲ್ಲರ್ ಕ್ಯಾಪ್ ಅಳವಡಿಕೆ ಕಾಮಗಾರಿ ಮುಗಿದಿದ್ದು, ಇನ್ನು ಆರು ತಿಂಗಳಲ್ಲಿ ಮಾರ್ಗದ ಕೆಲಸ ಮುಗಿಯಲಿದೆ.
ಕೆ.ಆರ್.ಪುರದಿಂದ ಕೆಂಪಾಪುರದವರೆಗೆ ಕಾಮಗಾರಿ ತೀರಾ ನಿಧಾನವಾಗಿ ಸಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ತಿರುವುಗಳಿರುವುದರಿಂದ ಕಾಮಗಾರಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಈ ಮಾರ್ಗದ ಶೇ.22ರಷ್ಟು ಪಿಲ್ಲರ್ ಕಾಮಗಾರಿ ಮುಗಿದಿದ್ದು, ಒಂದೂ ಯು-ಗರ್ಡರ್ ಅಳವಡಿಸಿಲ್ಲ. ಇದೇ ವೇಳೆ ಕೆಂಪಾಪುರದಿಂದ ಯಲಹಂಕ ವಾಯುನೆಲೆಯವರೆಗೆ ಹಾಗೂ ಯಲಹಂಕ ವಾಯುನೆಲೆಯಿಂದ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಶೇ. 30ರಷ್ಟು ಪಿಲ್ಲರ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಯು-ಗರ್ಡರ್ ಅಳವಡಿಕೆಯಾಗಿಲ್ಲ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಹೃದಯ ಭಾಗದಿಂದ 35 ರಿಂದ 40 ಕಿ.ಮೀ. ದೂರದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾಣ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ರೇಷ್ಮೆ ಸಂಸ್ಥೆಯಿಂದ- ವಿಮಾನ ನಿಲ್ದಾಣದವರೆಗೆ ಮೆಟ್ರೊ ಮಾರ್ಗಕ್ಕೆ ಅಂದಾಜು 14,788 ಕೋಟಿ ರೂ. ವ್ಯಯಿಸಲಾಗುತ್ತಿದೆ.
ವಿಳಂಬಕ್ಕೆ ಕಾರಣ ಏನು ?
ಜನವರಿಯಲ್ಲಿ ನಾಗವಾರ ರಿಂಗ್ ರೋಡ್ನ ಎಚ್ಬಿಆರ್ ಲೇಔಟ್ ಬಳಿ ಮೆಟ್ರೊ ಪಿಲ್ಲರ್ನ ಕಬ್ಬಿಣದ ಸರಳುಗಳ ಗುಚ್ಛ ದಿಢೀರ್ ಕುಸಿದು ಬಿದ್ದ ಪರಿಣಾಮ 35 ವರ್ಷದ ತೇಜಸ್ವಿನಿ ಹಾಗೂ ವಿಹಾನ್ (2 ವರ್ಷ 6 ತಿಂಗಳು) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂರು ತಿಂಗಳು ಕೆಲಸಕ್ಕೆ ತೊಂದರೆಯಾಗಿತ್ತು.
ದೊಡ್ಡಜಾಲದಲ್ಲಿ ರೈಲ್ವೆ ಕ್ರಾಸಿಂಗ್ ಅನುಮತಿ ವಿಳಂಬ, ವಾಯುನೆಲೆ ಬಳಿ ಗೇಲ್ ಗ್ಯಾಸ್ ಪೈಪ್ಲೈನ್ ಸ್ಥಳಾಂತರ, ಯಲಹಂಕ ವಾಯು ನೆಲೆಯಿಂದ ಭೂಮಿ ಹಸ್ತಾಂತರಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡಿರುವುದು, ಜಕ್ಕೂರು ಪ್ಲಾಂಟೇಶನ್ ಸಮೀಪ ಹಲವು ತಿಂಗಳ ಕಾಮಗಾರಿ ಸ್ಥಗಿತ, ಹೆಬ್ಬಾಳದ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಈ ಎಲ್ಲಾಕಾರಣದಿಂದ ಕಾಮಗಾರಿಗೆ ಹಿನ್ನಡೆ ಉಂಟಾಗಿತ್ತು.
ನಿಲ್ದಾಣಗಳು
ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ
ದೊಡ್ಡಜಾಲ
ಬೆಟ್ಟಹಲಸೂರು (ಟ್ರಂಪೆಟ್)
ಬಾಗಲೂರು ಅಡ್ಡರಸ್ತೆ
ಯಲಹಂಕ
ಜಕ್ಕೂರು ಅಡ್ಡರಸ್ತೆ
ಕೊಡಿಗೇಹಳ್ಳಿ
ಹೆಬ್ಬಾಳ
ಕೆಂಪಾಪುರ
ವೀರಣ್ಣ ಪಾಳ್ಯ
ನಾಗವಾರ
ಎಚ್ಬಿಆರ್ ಬಡಾವಣೆ
ಕಲ್ಯಾಣ ನಗರ
ಎಚ್ಆರ್ಬಿಆರ್ ಬಡಾಧಿವಣೆ
ಹೊರಮಾವು
ಚನ್ನಸಂದ್ರ
ಕಸ್ತೂರಿ ನಗರ
ಕೆ.ಆರ್.ಪುರ
ಮಹದೇವಪುರ
ಡಿಆರ್ಡಿಒ ಸಂಕೀರ್ಣ
ದೊಡ್ಡನೆಕ್ಕುಂದಿ
ಇಸ್ರೋ
ಮಾರತ್ತಹಳ್ಳಿ
ದೇವರಬೀಸನಹಳ್ಳಿ
ಕಾಡುಬೀಸನಹಳ್ಳಿ
ಬೆಳ್ಳಂದೂರು
ಇಬ್ಬಲೂರು
ಅಗರ
ಎಚ್ಎಸ್ಆರ್ ಬಡಾವಣೆ
ಸಿಲ್ಕ್ ಬೋರ್ಡ್