ಬೆಂಗಳೂರು: ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗೆ ಇಲ್ಲಿಯತನಕ 3 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಮಾತನಾಡಿದ ಅವರು, ಮೂರು ವರ್ಷದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ-ಕರ್ನಾಟಕ ಯೋಜನೆಯಡಿ 1.78 ಕೋಟಿ ಮಂದಿ ನೋಂದಣಿಯಾಗಿದ್ದಾರೆ. 39,48,923 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಅವರಿಗೆ ರಾಜ್ಯ ಸರ್ಕಾರದ 2188 ಕೋಟಿ, ಕೇಂದ್ರ ಸರ್ಕಾರ 908 ಕೋಟಿ ರೂ. ಸೇರಿ ಒಟ್ಟು 3,097.19 ಕೋಟಿ ಖರ್ಚು ಮಾಡಲಾಗಿದೆ ಎಂದರು.
ಇದರಲ್ಲಿ. ಶೇ.80ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಕ್ಕೆ ಹಣ ಪಾವತಿಯಾಗಿದೆ. ಎರಡನೇ, ಮೂರನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಮಂದಿ ಚಿಕಿತ್ಸೆ ಪಡೆದಿದ್ದು, ಅವರಿಗೆ 2022ರವರೆಗೂ ಎಲ್ಲಾ ರೀತಿಯ ಬಾಕಿ ಬಿಲ್ಗಳನ್ನು ಪಾವತಿಸಲಾಗಿದೆ. ಸರ್ಕಾರದ ಆರೋಗ್ಯ ವಿಮಾ ಯೋಜನೆಯಡಿ ಖರ್ಚು ಮಾಡುತ್ತಿರುವ ಅನುದಾನ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಶೇ.50: 50ರ ಅನುಪಾತದಲ್ಲಿ ಹಂಚಿಕೆಯಾಗಿದೆ. ಸರ್ಕಾರದ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯಕ್ಕೂ ಇದು ನೆರವು ನೀಡಿದೆ ಎಂದು ಹೇಳಿದ್ದಾರೆ.