ಮಂಡ್ಯ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯೊಂದೇ ಬಾಕಿ ಇದ್ದರೂ ಸಹ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯಲ್ಲಿ ಬಂಡಾಯ ಹಾಗೂ ಗುಂಪುಗಾರಿಕೆ ಬೆಂಕಿ ಮಾತ್ರ ಹೊಗೆಯಾಡುತ್ತಿದೆ.
ಕ್ಷೇತ್ರದಲ್ಲಿ ಮೂಲ ಹಾಗೂ ವಲಸಿಗರ ಗುಂಪುಗಳ ನಡುವೆ ಬಂಡಾಯದ ಚಟುವಟಿಕೆ ತೀವ್ರಗೊಂಡಿದೆ. ಇಲ್ಲಿಯವರೆಗೂ ಕಾಂಗ್ರೇಸ್ ಮತ್ತು ಜೆಡಿಎಸ್ ನಡುವೆ ನಡೆಯುತ್ತಿದ್ದ ಜಿದ್ದಾಜಿದ್ದಿ ಈಗ ಬಿಜೆಪಿಯನ್ನು ಆವರಿಸಿದೆ.
ಮದ್ದೂರು ಕ್ಷೇತ್ರದಲ್ಲಿ ಮೂಲ ಬಿಜೆಪಿಯ ಗುಂಪಿನಲ್ಲಿ ಮನ್ ಮುಲ್ ನಿರ್ದೇಶಕಿ ರೂಪ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಮದ್ದೂರು ಕ್ಷೇತ್ರದಲ್ಲಿ ಸಮಾಜ ಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.
ಈ ನಡುವೆ ಜೆಡಿಎಸ್ ತೊರೆದು ಸಚಿವ ಕೆ.ಸಿ.ನಾರಾಯಣಗೌಡ ನಾಯಕತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡ ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಮ್ಮ ಪುತ್ರ ದಿ.ಶ್ರೀನಿಧಿಗೌಡ ಪ್ರತಿಷ್ಠಾನ ಹೆಸರಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ, ಉದ್ಯೋಗ ಮೇಳ ಸೇರಿದಂತೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದಾರೆ.
ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಬೃಹತ್ ಸಮಾವೇಶಗಳಲ್ಲಿ ಜನ ಸಂಘಟನೆ ಮಾಡಿ ಕಮಲ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಎಸ್.ಪಿ.ಸ್ವಾಮಿಯೇ ಮದ್ದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್.ಪಿ.ಸ್ವಾಮಿ ಕ್ಷೇತ್ರದಾದ್ಯಂತ ಪಕ್ಷದ ಪರ ಪ್ರಚಾರ ನಡೆಸಿ ಕಾರ್ಯಕರ್ತರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆ ನಂತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವುದು ಮದ್ದೂರು ಕ್ಷೇತ್ರದಲ್ಲಿ ಅಂಬರೀಶ್ ಬೆಂಬಲಿಗರು ಈ ಬಾರಿ ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಎಸ್.ಪಿ.ಸ್ವಾಮಿ ಅವರಿಗೆ ಆನೆ ಬಲ ಬಂದಂತಾಗಿದೆ.
ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರಗಾರಿಕೆಯನ್ನು ಕಮಲ ನಾಯಕರು ರೂಪಿಸುತ್ತಿದ್ದರೇ, ಇತ್ತ ಮದ್ದೂರು ಕ್ಷೇತ್ರದಲ್ಲಿ ಬಿಜೆಪಿಯ ಮೂಲ ಹಾಗೂ ವಲಸಿಗರ ನಡುವಿನ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ.
ಒಟ್ಟಾರೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣವಿದ್ದರೂ ಗೆಲ್ಲುವ ಅವಕಾಶವನ್ನು ನಿರ್ಮಾಣ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಬಿಜೆಪಿ ನಾಯಕರು ತಲುಪಿದ್ದಾರೆ.
ಗುಂಪುಗಾರಿಕೆಯನ್ನು ಸರಿದೂಗಿಸಿಕೊಂಡು ಹೋಗುವ ನಾಯಕರು ಯಾರು. ಚುನಾವಣೆ ಹೊತ್ತಿಗೆ ಬಿಜೆಪಿಯ ಭಿನ್ನಮತ ಬಗೆಹರಿಯುತ್ತಾ. ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಎದುರಿಸುವ ಬದಲು ಬಿಜೆಪಿಗೆ ಬಿಜೆಪಿಯೇ ವಿರೋಧವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಗಿರೀಶ್ ರಾಜ್ ಮಂಡ್ಯ.