ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರು ಮಂದಿ ಬ್ರಿಟಿಷ್ ರಾಜತಾಂತ್ರಿಕರನ್ನು ರಷ್ಯಾ ಹೊರ ಹಾಕಿದೆ. ರಾಜತಾಂತ್ರಿಕರು ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೇಶದ ಗುಪ್ತಚರ ಸಂಸ್ಥೆ ಎಫ್ಎಸ್ಬಿ ಆರೋಪಿಸಿದೆ. ಇದು ಈ ಮೂಲಕ ಮೊದಲೇ ಹದಗೆಟ್ಟಿರುವ ಮಾಸ್ಕೊ- ಯುಕೆ ಸಂಬಂಧಗಳು ಮತ್ತಷ್ಟು ಹಳಸಲು ಕಾರಣವಾಗಲಿದೆ.
ರಷ್ಯಾಗೆ ಕಾರ್ಯತಂತ್ರದ ಸೋಲನ್ನು ಉಂಟುಮಾಡುವ ಪ್ರಯತ್ನವಾಗಿ ಯುಕೆ ರಷ್ಯಾದಲ್ಲಿ ವಿಧ್ವಂಸಕ ನೀತಿಗಳನ್ನು ಬೆಂಬಲಿಸಿದೆ ಮತ್ತು ಈ ಪ್ರಯತ್ನಗಳಿಗೆ ವಿದೇಶಾಂಗ ಮತ್ತು ಕಾಮನ್ವೆಲ್ತ್ ಕಚೇರಿಯ ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾ ನಿರ್ದೇಶನಾಲಯ (ಇಇಸಿಎಡಿ)ವು ನೇತೃತ್ವ ವಹಿಸಿದೆ ಎಂದು ಸಂಸ್ಥೆ ಹೇಳಿದೆ. ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಇಇಸಿಎಡಿ ಮೂಲಭೂತವಾಗಿ ಮಾಸ್ಕೋ ವಿರುದ್ಧ ಕೆಲಸ ಮಾಡುವ ವಿಶೇಷ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಅದರ ಉದ್ಯೋಗಿಗಳು ರಷ್ಯಾದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ಎಫ್ಎಸ್ಬಿ ಆರೋಪಿಸಿದೆ.
ಈ ವಿಚಾರ ಮತ್ತು ಯುಕೆಯ ಇತರ ಪ್ರತಿಕೂಲ ಕೃತ್ಯಗಳ ಕಾರಣಕ್ಕಾಗಿ ರಷ್ಯಾದ ವಿದೇಶಾಂಗ ಸಚಿವಾಲಯವು ಸಂಬಂಧಿತ ಇಲಾಖೆಗಳ ಸಹಕಾರದೊಂದಿಗೆ, ಮಾಸ್ಕೋದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯ ರಾಜಕೀಯ ವಿಭಾಗದ ಆರು ರಾಜತಾಂತ್ರಿಕರ ಮಾನ್ಯತೆಯನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದಲ್ಲಿನ ಬ್ರಿಟಿಷ್ ರಾಜತಾಂತ್ರಿಕರು ನಮ್ಮ ಜನರಿಗೆ ಹಾನಿ ಮಾಡುವ ಕೃತ್ಯಗಳಲ್ಲಿ ಭಾಗಿಯಾಗಿರುವ ಎಫ್ಎಸ್ಬಿಯ ಆರೋಪಗಳನ್ನು ತಾವು ಸಂಪೂರ್ಣವಾಗಿ ಬೆಂಬಲಿಸುವುದಾಗಿ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಖರೋವಾ ಹೇಳಿದ್ದಾರೆ. ಉಚ್ಚಾಟನೆಗೊಂಡ ರಾಜತಾಂತ್ರಿಕರು ಶೀಘ್ರವೇ ದೇಶ ಬಿಟ್ಟು ಹೊರಡಬೇಕೆಂದು ರಷ್ಯಾ ಸೂಚನೆ ನೀಡಿದೆ.
ಬ್ರಿಟಿಷ್ ಅಧಿಕಾರಿಗಳು ಈ ಆರೋಪಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಎರಡೂ ದೇಶಗಳು ನಿರಂತರವಾಗಿ ಪರಸ್ಪರ ರಾಜತಾಂತ್ರಿಕರನ್ನು ಹೊರಹಾಕಿದ್ದರಿಂದ ಮತ್ತು ನಿರ್ಬಂಧಗಳನ್ನು ವಿಧಿಸಿದ್ದರಿಂದ ರಷ್ಯಾ ಮತ್ತು ಯುಕೆ ನಡುವಿನ ಸಂಬಂಧಗಳು ಮತ್ತಷ್ಟು ಹಳಸಲಿದೆ.