ಚೀನಾದತ್ತ ವಾಲುತ್ತಿದ್ದ ಶ್ರೀಲಂಕಾವನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದಲ್ಲಿ ಮೊದಲ ಯಶಸ್ಸು ಲಭಿಸಿದ್ದು, ಚೀನಾ ಪಾಲಾಗಿದ್ದ ಟೆಂಡರ್ ಅನ್ನು ರದ್ದು ಮಾಡಿರುವ ಶ್ರೀಲಂಕಾ ಇದೀಗ ಅದನ್ನು ಭಾರತಕ್ಕೆ ನೀಡಿದೆ.
ಚೀನಾಗೆ ನೀಡಿದ್ದ ನಾಲ್ಕು ಇಂಧನ ಯೋಜನೆಗಳನ್ನು ಶ್ರೀಲಂಕಾ ದೇಶವು ಚೀನಾದಿಂದ ವಾಪಸ್ ಪಡೆದು ಭಾರತಕ್ಕೆ ನೀಡಿದೆ. ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮೂರು ಸೌರ ವಿದ್ಯುತ್ ಉತ್ಪಾದನೆ ಘಟಕ ಹಾಗೂ ಒಂದು ಹೈಬ್ರಿಡ್ ವಿದ್ಯುತ್ ಉತ್ಪಾದನೆ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಭಾರತದ ಕಂಪನಿಗಳಿಗೆ ನೀಡಿದೆ. ಇದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಮುನ್ನಡೆಯಾಗಿದೆ.
ಇದಕ್ಕೂ ಮೊದಲು ಯೋಜನೆಗಳಿಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅನುದಾನ ನೀಡಲಾಗಿತ್ತು. ಅಷ್ಟೇ ಅಲ್ಲ, ನಾಲ್ಕೂ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಲಾಗಿತ್ತು. ಈಗ ಚೀನಾ ಕಂಪನಿಯನ್ನು ಬಿಟ್ಟು, ಭಾರತದ ಕಂಪನಿಗೆ ದ್ವೀಪರಾಷ್ಟ್ರವು ಗುತ್ತಿಗೆ ನೀಡಿದೆ. ಒಪ್ಪಂದ ಮಾಡಿಕೊಂಡಿರುವ ಕುರಿತು ಶ್ರೀಲಂಕಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಫೋಟೊಗಳ ಸಮೇತ ಪೋಸ್ಟ್ ಮಾಡಿದ್ದು, ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನರ್ ಸಂತೋಷ್ ಝಾ ಹಾಗೂ ಶ್ರೀಲಂಕಾ ಸಚಿವ ಇಂಡಿಕಾ ಅನುರಾಧಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶ್ರೀಲಂಕಾದ ನೈನಿತಿವು, ಅನಾಲತಿವು ಹಾಗೂ ಡೆಲ್ಫ್ಟ್ ದ್ವೀಪಗಳಲ್ಲಿ ಮೂರು ಸೌರ ವಿದ್ಯುತ್ ಘಟಕ ಹಾಗೂ ಜಾಫ್ನಾದಲ್ಲಿ ಹೈಬ್ರಿಡ್ ವಿದ್ಯುತ್ ಉತ್ಪಾದನೆ ಘಟಕ ನಿರ್ಮಿಸಲಾಗುತ್ತದೆ” ಎಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.
ಅಂದಹಾಗೆ ಆರಂಭದಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಸಾಲದಿಂದ ಹಣಕಾಸು ಒದಗಿಸಲಾಗಿದ್ದು, ಚೀನಾದ ಭಾಗವಹಿಸುವಿಕೆಯ ಬಗ್ಗೆ ಭಾರತದ ಆತಂಕದಿಂದಾಗಿ ಈ ಯೋಜನೆಯನ್ನು ಎರಡು ವರ್ಷಗಳ ಹಿಂದೆ ತಡೆಹಿಡಿಯಲಾಗಿತ್ತು. ಆದರೆ ಇದೀಗ ಈ ಯೋಜನೆಗೆ ಮರು ಚಾಲನೆ ಸಿಕ್ಕಿದೆ.
ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗಿದೆ ಮತ್ತು ಈಗ ಭಾರತ ಸರ್ಕಾರದಿಂದ 11 ಮಿಲಿಯನ್ ಡಾಲರ್ ಅನುದಾನದಿಂದ ಸಂಪೂರ್ಣವಾಗಿ ಹಣವನ್ನು ನೀಡಲಾಗಿದೆ ಎಂದು ಶ್ರೀಲಂಕಾದ ಇಂಧನ ಸಚಿವಾಲಯ ಪತ್ರಿಕಾ ಪ್ರಕಟಣೆಯ್ಲಿ ತಿಳಿಸಿದೆ.