ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಎರಡನೇ ಸುತ್ತಿನ ಮತ ಎಣಿಕೆಯ ನಂತರ ಮಾರ್ಕ್ಸ್ವಾದಿ ನಾಯಕ ಅನುರ ಕುಮಾರ ಡಿಸಾನಾಯಕೆ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಏರುವ ಕನಸು ಕಂಡಿದ್ದ ಹಾಲಿ ಅಧ್ಯಕ್ಷರಾಗಿದ್ದ ರನಿಲಾ ವಿಕ್ಸಮಸಿಂಘೆ ಕನಸು ಭಗ್ನವಾಗಿದೆ.
ಮಾರ್ಕ್ಸ್ವಾದಿ ಜನತಾ ವಿಮುಕ್ತಿ ಪೆರಮುನ ಪಕ್ಷದ ವಿಶಾಲ ರಂಗದ ನ್ಯಾಷನಲ್ ಪೀಪಲ್ಸ್ ಪವರ್ ನಾಯಕ 56 ವರ್ಷದ ಅನುರಾ ಡಿಸ್ಸಾನಾಯಕೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (SJBಯ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು.
ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಮೊದಲ ಸುತ್ತಿನಲ್ಲೇ ಮತಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಿಸುವಲ್ಲಿ ವಿಫಲರಾದರು. ದಿಸಾನಾಯಕ ಅವರು ಇಂದು ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅನುರಾ ಗೆಲುವು, ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾದ ರಾಜಕೀಯ ವ್ಯವಸ್ಥೆಯ ನಿರಾಕರಣೆಯನ್ನು ಸೂಚಿಸುತ್ತದೆ. 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 3 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದ ಜೆವಿಪಿಗೆ ಈ ಗೆಲುವು ಪ್ರಮುಖ ರಾಜಕೀಯ ತಿರುವನ್ನು ನೀಡಿದೆ.
ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಶ್ರೀಲಂಕಾದ ಜನರು ಹೊಸ ಅಧ್ಯಕ್ಷರ ಆಯ್ಕೆಗೆ ಶನಿವಾರ ಮತ ಚಲಾಯಿಸಿದ್ದರು. ಶೇ.76 ರಷ್ಟು ಮತದಾನವಾಗಿತ್ತು.
ಎರಡು ವರ್ಷಗಳ ಹಿಂದೆ ಗೊಟಬಯ ರಾಜಪಕ್ಸ ಆಡಳಿತದ ವಿರುದ್ಧ ಜನರು ದಂಗೆಯೆದ್ದಿದ್ದರು. ಪರಿಣಾಮವಾಗಿ ರಾಜಪಕ್ಸ ಪಲಾಯನಗೈದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ದಿಸಾನಾಯಕೆ ಅವರು ಶ್ರೀಲಂಕಾದ 9ನೇ ಅಧ್ಯಕ್ಷರಾಗಲಿದ್ದಾರೆ.