ಮುಂಬೈ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಸೆಮೀಸ್ ಹೊಸ್ತಿಲಲ್ಲಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಜಯಿಸುವ ಮೂಲಕ ಅಧಿಕೃತವಾಗಿ ಮೊದಲ ತಂಡವಾಗಿ ಸೆಮೀಸ್ ಪ್ರವೇಶಿಸುವ ಕನವರಿಕೆಯಲ್ಲಿದೆ. ಇನ್ನೊಂದೆಡೆ ಸೆಮೀಸ್ ಆಸೆ ಜೀವಂತವಾಗಿರಿಸಿಕೊಳ್ಳಲು ಲಂಕಾ ಪಡೆ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ.
2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಕಾದಾಡಿದ್ದವು. ಇದೀಗ ಮತ್ತೊಮ್ಮೆ ಉಭಯ ತಂಡಗಳು ಇಲ್ಲಿನ ವಾಂಖೇಡೆ ಮೈದಾನದಲ್ಲಿ ಮುಖಾಮುಖಿಯಾಗಿವೆ. ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಧನಂಜಯ ಡಿ ಸಿಲ್ವಾ ಬದಲಿಗೆ ಹೇಮಂತ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಆಡಿರುವ ಆರೂ ಪಂದ್ಯಗಳನ್ನು ಗೆದ್ದಿರುವ ಭಾರತ, ಈ ಪಂದ್ಯವನ್ನೂ ಗೆದ್ದರೆ ಸೆಮಿಫೈನಲ್ ಪ್ರವೇಶ ಅಧಿಕೃತಗೊಳ್ಳಲಿದೆ. ಇದಾದ ಮೇಲೆ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿರುವ ಭಾರತಕ್ಕೆ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರಾಗಲಿದೆ. ಕೊನೆಯ ಪಂದ್ಯದವರೆಗೂ ಕಾಯದೆ ಲಂಕಾ ವಿರುದ್ಧವೇ ಗೆದ್ದು ಸೆಮೀಸ್ ಸ್ಥಾನ ಖಚಿತಪಡಿಸಿಕೊಳ್ಳಲು ಟೀಂ ಇಂಡಿಯಾ ಎದುರು ನೋಡುತ್ತಿದೆ. ಮತ್ತೊಂದೆಡೆ ಕುಸಾಲ್ ಮೆಂಡಿಸ್ ನೇತೃತ್ವದ ಲಂಕಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಇದುವರೆಗೂ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಲಂಕಾ ಸೆಮೀಸ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.