ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಶ್ರೀರಾಮಸೇನೆ ಖಂಡನೆ ವ್ಯಕ್ತಪಡಿಸಿದೆ.
ಬಾಂಗ್ಲಾದಲ್ಲಿ ಸಂಭವಿಸಿದ ಆಂತರಿಕ ಮೀಸಲಾತಿ ಕಿಚ್ಚು ಇಡೀ ದೇಶವನ್ನೇ ಸುಡ್ತಿದೆ. ಪ್ರಧಾನಿ ಮನೆಯನ್ನೇ ಧ್ವಂಸ ಮಾಡಿದ ಕಿಡಿಗೇಡಿಗಳು ಕಂಡ ಕಂಡಲ್ಲಿ ಕೇಕೆ ಹಾಕ್ತಿದ್ದಾರೆ.
ಇದರ ನಡುವೆ ಹಿಂದೂ ಕುಟುಂಬಗಳನ್ನೇ ಟಾರ್ಗೆಟ್ ಮಾಡಿಕೊಂಡಿರೋ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇದು ಹಿಂದೂ ಸಮಾಜದವರ ರಕ್ತ ಕುದಿಯುವಂತೆ ಮಾಡಿದೆ. ಹಾಗಾಗಿ ಕರ್ನಾಟಕದಲ್ಲಿರುವ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಹೆಮ್ಮೆಟ್ಟಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ.
ನಗರದಲ್ಲಿ ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ನೆಲಸಿರುವ ಬಗ್ಗೆ ಈಗಾಗಲೇ ಪೊಲೀಸರಿಗೂ ಮಾಹಿತಿ ಇದೆ. ಹಾಗಾಗಿ ಅಕ್ರಮ ವಲಸಿಗರ ಮೇಲೆ ದಾಳಿ ಕೂಡ ನಡೆದು ಕೆಲವರನ್ನು ವಾಪಸ್ಸು ಕಳುಹಿಸಲಾಗಿದೆ. ಆದರೆ ಈಗ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆ ಹಾಗು ಹಿಂದೂಗಳ ಹತ್ಯೆಯಿಂದಾಗಿ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರನ್ನ ಭೇಟಿ ಮಾಡಿ ನಗರದಲ್ಲಿ ಅಕ್ರಮವಾಗಿ ನೆಲಸಿರುವ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಬರ್ಮಾ ರೋಹಿಂಗ್ಯಾ ಮುಸ್ಲಿಮರನ್ನು ಕರ್ನಾಟಕದಿಂದ ಕಳುಹಿಸಬೇಕು ಎಂದು ಆಗ್ರಹಿಸಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಲ್ಲಿ 4 ರಿಂದ 5 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲಿಮರು ಇದ್ದಾರೆ. ಅದರ ಮಾಹಿತಿಯನ್ನು ನಾವೇ ಪೊಲೀಸರಿಗೆ ನೀಡ್ತಿವಿ ಎಂದು ಶ್ರೀರಾಮಸೇನೆ ಹೇಳಿದೆ