ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಳಿಕ ಒಂದೊಂದೆ ಪ್ರಕರಣಗಳು ಆಚೆ ಬರುತ್ತಿದೆ. ದರ್ಶನ್ ಮ್ಯಾನೇಜರ್ ಮಲ್ಲಿ ಕಾಣೆಯಾದ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೆ, ಅನೆಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಧರ್ ಎಂಬಾತನ ಆತ್ಮಹತ್ಯೆ ಪ್ರಕರಣ ಸುದ್ದಿಯಾಗಿತ್ತು. ಏಪ್ರಿಲ್ 17 ರಂದು ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರೀಧರ್ ದರ್ಶನ್ ಫಾರ್ಮ್ ಹೌಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಆದರೆ ಇದೀಗ ವೈರಲ್ ಸುದ್ದಿಗೆ ಸ್ಪಷ್ಟನೆ ನೀಡಿರುವ ಶ್ರೀಧರ್ ಕುಟುಂಬಸ್ಥರು ಆತ ದರ್ಶನ್ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತಿರಲಿಲ್ಲ ಎಂದಿದ್ದಾರೆ.
ಮೃತ ಶ್ರೀಧರ್ ದುರ್ಗ ಕನ್ಸ್ಟ್ರಕ್ಷನ್ನಲ್ಲಿ ಕೆಲಸ ಮಾಡುತ್ತಿದ್ದನಂತೆ. ಕಳೆದ ಐದು ವರ್ಷ ರೈಟರ್ ಆಗಿ ಶ್ರೀಧರ್ ಕೆಲಸ ಮಾಡಿದ್ದು, ಅಲ್ಲಿ ವೇತನ ಕೊಡದೇ ಆತನನ್ನು ದುಡಿಸಿಕೊಂಡಿದ್ದ ಆರೋಪವಿದೆ. ದುಡಿಮೆಯ ಬಗ್ಗೆ ಪೋಷಕರು ಪ್ರಶ್ನಿಸಿದಕ್ಕೆ ಆತ್ಮಹತ್ಯೆಗೆ ಸಹ ಪ್ರಯತ್ನ ಪಟ್ಟಿದ್ದ. ವರ್ಷದ ಹಿಂದೆ ಇಲಿ ಪಾಷಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ, ಆತ ಖಿನ್ನತೆಯಲ್ಲಿಯೂ ಇದ್ದ ಎನ್ನಲಾಗುತ್ತಿದೆ.
ವೇತನ ಕೊಡದೇ ದುಡಿಸಿಕೊಂಡಿದ್ದ ದುರ್ಗ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದ ಶ್ರೀಧರ್, ಖಿನ್ನತೆಗೆ ಜಾರಿದ್ದ, ಬಳಿಕ ಮತ್ತೆ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ, ನಿವೇಶನ ನೀಡಿ ಮನೆ ಕಟ್ಟಿ ಕೊಡುವುದಾಗಿ ಕಂಪೆನಿಯವರು ಹೇಳಿದ್ದರಂತೆ. ಆದರೆ ಕಂಪನಿಯವರು ಮನೆ, ಹಣ ಯಾವುದೂ ನೀಡದೇ ಇದ್ದಿದ್ದಕ್ಕೆ ಶ್ರೀಧರ್ ಬೇಸರಗೊಂಡಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕೆ ಡೆತ್ ನೋಟ್ ಬರೆದು ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದ. ಸಾಯುವ ಮುನ್ನ ವಿಡಿಯೋ ಸಹ ಮಾಡಿದ್ದ. ಶ್ರೀಧರ್ಗೂ ದರ್ಶನ್ಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಹಾಗೂ ಶ್ರೀಧರ್ ಕುಟುಂಬದವರು ಸಹ ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯೊಂದರಿಂದ ಶ್ರೀಧರ್ಗೆ ಮೋಸವಾಗಿದ್ದು, ಆತನ ಸಾವಿಗೆ ಅದೇ ಕಾರಣ, ಹಾಗಾಗಿ ಶ್ರೀಧರ್ ಸಾವಿಗೆ ನ್ಯಾಯ ಕೊಡಬೇಕೆಂದು ಕುಟುಂಬದವರು ಆರೋಪಿಸಿದ್ದಾರೆ.