ಬಳ್ಳಾರಿ: ಶ್ರೀರಾಮುಲು (Sriramulu) 200 ಕೋಟಿ ಹಣ ಖರ್ಚು ಮಾಡಿದರೂ ಗೆಲ್ಲುವುದಿಲ್ಲ. ನನ್ನ ವ್ಯಕ್ತಿತ್ವ, ಕೆಲಸ, ಸರಳತೆಯ ಮೇಲೆ ಜನರು ಮತ ನೀಡಲಿದ್ದಾರೆ ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ನನ್ನ ವಿರುದ್ಧ ಸ್ಪರ್ಧೆ ಮಾಡಿದರೆ ಸ್ವಾಗತ ಮಾಡುತ್ತೇನೆ. ಶ್ರೀರಾಮುಲು, ನಾನು ಒಟ್ಟಿಗೆ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸಿದರೆ ನನಗೆ ಬೇಜಾರಿಲ್ಲ. ರಾಮುಲು ವಿಚಾರಧಾರೆಗಳೇ ಬೇರೆ, ನಮ್ಮ ವಿಚಾರಧಾರೆಗಳೇ ಬೇರೆ. ಸ್ನೇಹಿತರಾದ್ರೂ ರಾಜಕೀಯವಾಗಿ ಯಾವುದೇ ಹೊಂದಾಣಿಕೆಯಿಲ್ಲ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನನ್ನ ರಣತಂತ್ರ ಬೇರೆಯೇ ಇದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕೇವಲ ಕಣ್ಣೊರೆಸುವ ತಂತ್ರ. ರಾಮುಲು ಸಚಿವರಾದ ನಂತರ ಉತ್ತಮವಾಗಿ ಕೆಲಸ ಮಾಡಬಹುದಿತ್ತು. ಆದರೆ ರಾಮುಲು ಜಿಲ್ಲೆಯ ಶಾಸಕರನ್ನು ಒಗ್ಗೂಡಿಸಿ ಕೆಲಸ ಮಾಡಲಿಲ್ಲ. ನಾನು ಕ್ಷೇತ್ರದ ಮತದಾರರ ಬೆಂಬಲದಿಂದ ಗೆಲುವು ಸಾಧಿಸುತ್ತೇನೆ. ಗೆದ್ದ ಬಳಿಕ ಪಕ್ಷ ನನಗೆ ದೊಡ್ಡ ಸ್ಥಾನಮಾನ ನೀಡುವ ವಿಶ್ವಾಸ ಇದೆ ಎಂದರು.
BJP ಗೆದರೆ ಕೋಮುಗಲಭೆ ಆಗುವ ಸಾಧ್ಯತೆ ಇದೆ ಅಂತಾ ಜನರಿಗೆ ಭಯವಿದೆ. ಕೋಮುವಾದಿಗಳಿಗೆ ಮತ ನೀಡಬಾರದು ಅಂತಾ ಜನರು ನಿರ್ಧರಿಸಿದ್ದಾರೆ. ಜನಾರ್ದನ ರೆಡ್ಡಿ ಯಾವುದೇ ಪಕ್ಷದಲ್ಲಿರಲಿ, ಅವರು ರಾಜಕೀಯ ಗುರು. ಅವರನ್ನು ನಾನು ಯಾವತ್ತೂ ಮರೆಯಲ್ಲ. ನನ್ನ ವಿರುದ್ಧ ಅವರ ಪಕ್ಷದ ಅಭ್ಯರ್ಥಿ ಹಾಕುತ್ತಾರೋ ಇಲ್ವೋ ಗೊತ್ತಿಲ್ಲ. ಪರೋಕ್ಷವಾಗಿ ಸಹಾಯ ಮಾಡಿದರೆ ಶ್ರೀರಾಮುಲು ಸೋಲಿಸಬಹುದು ಎಂದು ಹೇಳಿದರು.