ಬೆಂಗಳೂರು: ತಾಯಿಯ ಅಂತ್ಯಕ್ರಿಯೆ ಮುಗಿಸಿ ಕೆಲಸಕ್ಕೆ ಹಾಜರಾದ ಸಿಬ್ಬಂದಿಯ ಕಾರ್ಯ ವೈಖರಿಗೆ ಡಿಜಿ, ಐಜಿಪಿ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಪ್ರವೀಣ್ ಸೂದ್, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ನಮ್ಮ ಸಿಬ್ಬಂದಿಯೊಬ್ಬರ ತಾಯಿ ನಿಧನರಾಗಿದ್ದರು. ಅವರಿಗೆ ರಜೆ ತೆಗೆದುಕೊಳ್ಳಿ ಎಂದು ಹೇಳಲಾಗಿತ್ತು. ಆದರೂ, ರಜೆ ತೆಗೆದುಕೊಳ್ಳದೇ ಕರ್ತವ್ಯದಲ್ಲಿ ಮುಂದುವರಿಯುವುದಾಗಿ ಹೇಳಿದರು.
ಇದು ನಿಜಕ್ಕೂ ಹೆಮ್ಮೆ ಪಡುವ ವಿಷಯ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿ ಬದ್ಧತೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ಸಹೋದ್ಯೋಗಿಗಳು ಸನ್ಮಾನಿಸಿದ ವಿಡಿಯೋ ಶೇರ್ ಮಾಡಿದ್ದಾರೆ. ಪ್ರವೀಣ್ ಸೂದ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಾತನಾಡಿದ ಪೊಲೀಸ್ ಸಿಬ್ಬಂದಿ, “ನನ್ನ ತಾಯಿಗೆ ಹುಷಾರಿರಲಿಲ್ಲ, ಅವರಿಗೆ 80 ವರ್ಷದ ಆಸುಪಾಸು. ಒಂದು ವರ್ಷದ ಹಿಂದೆ ಜಾರಿಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ರು.
ಆಪರೇಷನ್ ಮಾಡಿಸಿದ್ರೂ ಕೂಡ ಕಾಲು ಸರಿಯಾಗಿರಲಿಲ್ಲ. ನಿನ್ನೆ ಸ್ಪಲ್ಪ ಉಸಿರಾಟದ ತೊಂದರೆಯಾಗಿದ್ದು, ಬೆಳಗಿನ ಜಾವ ತೀರಿಕೊಂಡರು. ಮನೆಯಲ್ಲಿ ಅಣ್ಣ ಇದ್ದಾನೆ, ಉಳಿದ ಎಲ್ಲ ಕಾರ್ಯಕ್ರಮಗಳನ್ನು ಮನೆಯವರು ನೋಡಿಕೊಳ್ಳುತ್ತಾರೆ ಎಂದು ತಿಳಿದು, ಎಲೆಕ್ಷನ್ ಡ್ಯೂಟಿ ಇರುವ ಕಾರಣ ನಾನು ಕೆಲಸಕ್ಕೆ ಬಂದಿದ್ದೇನೆ. ನಮ್ಮನ್ನು ಹೆತ್ತುಹೊತ್ತ ಸಾಕಿದ ತಾಯಿ ಸಾವನ್ನಪ್ಪಿದ್ದಾರೆ. ಈಗ ನಮ್ಮನ್ನು ಸಾಕಿ, ಜೋಪಾನ ಮಾಡುತ್ತಿರುವುದು ಪೊಲೀಸ್ ಇಲಾಖೆ, ಇದು ಸಹ ನಮ್ಮ ತಾಯಿಯೇ. ಇಬ್ಬರೂ ತಾಯಂದಿರು ಒಂದೇ” ಎನ್ನುವ ಮೂಲಕ ಕೆಲಸ ಮೇಲಿನ ವಿಶೇಷ ಆಸಕ್ತಿ ವ್ಯಕ್ತಪಡಿಸಿದ್ದಾರೆ.