ಕೇಪ್ಟೌನ್: 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕಳೆದ ಬಾರಿ ರನ್ನರ್-ಅಪ್ ಭಾರತ ತಂಡಕ್ಕೆ 5 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ಸವಾಲು ಎದುರಾಗಲಿದೆ. ಪಂದ್ಯ ಗುರುವಾರ(ಫೆ.23) ನಡೆಯಲಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಹರ್ಮನ್‌ಪ್ರೀತ್ ಕೌರ್ ಬಳಗ 3 ಗೆಲುವು, 1 ಸೋಲಿನೊಂದಿಗೆ 6 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆಯಿತು. ಆರಂಭಿಕ 2 ಪಂದ್ಯಗಳಲ್ಲಿ ಪಾಕಿಸ್ತಾನ,
ವೆಸ್ಟ್ಇಂಡೀಸ್ ವಿರುದ್ಧ ಗೆದ್ದು ಬಳಿಕ ಇಂಗ್ಲೆಂಡ್‌ಗೆ ಶರಣಾದರೂ ಕೊನೆ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿ ಸೆಮೀಸ್ಗೇರಿದೆ. ಎಲ್ಲಾ 4 ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಇಂಗ್ಲೆಂಡ್ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ಅಂತಿಮ 4ರ ಘಟ್ಟ ಪ್ರವೇಶಿಸಿತು. ಮತ್ತೊಂದೆಡೆ ಆಸೀಸ್ ಗುಂಪು ಹಂತದಲ್ಲಿ ಆಡಿರುವ ಎಲ್ಲಾ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು, ‘ಎ’ ಗುಂಪಿನಲ್ಲಿ ನಂ.1 ಸ್ಥಾನ ಪಡೆದು ಉಪಾಂತ್ಯ ತಲುಪಿದೆ.
ಭಾರತ ತಂಡದ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದು, ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಡುತ್ತಿದ್ದಾರೆ. ಮಂಧನಾ 3 ಇನಿಂಗ್ಸ್‌ಗಳನ್ನಾಡಿ ಎರಡು ಅರ್ಧಶತಕ ಸಹಿತ 49.67ರ ಸರಾಸರಿಯಲ್ಲಿ 149 ರನ್ ಬಾರಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಕೂಡಾ 4 ಪಂದ್ಯಗಳನ್ನಾಡಿ 122 ರನ್ ಸಿಡಿಸಿದ್ದಾರೆ.
ಇನ್ನುಳಿದಂತೆ ಸೆಮೀಸ್‌ನಲ್ಲಿ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ಹರ್ಮನ್‌ಪ್ರೀತ್ ಕೌರ್ ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಿದರೆ, ಆಸೀಸ್ ಎದುರು ಪ್ರಾಬಲ್ಯ ಮೆರೆಯಬಹುದಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತ ಕೊಂಚ ದುರ್ಬಲವಾಗಿ ಗುರುತಿಸಿಕೊಂಡಿದ್ದು, ರೇಣುಕಾ ಸಿಂಗ್ ಹೊರತುಪಡಿಸಿ, ಉಳಿದ ಬೌಲರ್‌ಗಳು ಮಾರಕ ದಾಳಿ ನಡೆಸಲು ವಿಫಲವಾಗಿದ್ದಾರೆ. ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ ಅವರು ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.