ಚೆನ್ನೈ :– ತಮಿಳುನಾಡು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿನಲ್ಲಿ ಇತ್ತೀಚೆಗೆ ಉಂಟಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ.
ರಾಜ್ಯದಲ್ಲಿ ಭಾರಿ ಸಂಕಷ್ಟಕ್ಕೆ ಕಾರಣವಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಕೋರಿದ್ದರು. ರಾಷ್ಟ್ರೀಯ ವಿಪತ್ತು ಘೋಷಣೆಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಮಳೆಯಿಂದಾದ ಅನಾಹುತಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಸರ್ಕಾರವನ್ನು ನಿರ್ಮಲಾ ಸೀತಾರಾಮನ್ ತೀವ್ರವಾಗಿ ಟೀಕಿಸಿದರು. ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿಲ್ಲ ಎಂದು ಆರೋಪಿಸಿದರು. 2015ರ ಪ್ರವಾಹದ ನಂತರವೂ ಸರ್ಕಾರ ಪಾಠ ಕಲಿತಿಲ್ಲ. ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹವನ್ನು ತಪ್ಪಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯವು ಕೋರಿರುವ ಹೆಚ್ಚುವರಿ ಹಣಕಾಸು ನೆರವು ಹಂಚಿಕೆ ಕುರಿತು ಗೃಹ ಸಚಿವಾಲಯವು ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯವು ಈ ಹಿಂದೆ ಮಂಜೂರು ಮಾಡಿದ ಹಣವನ್ನು ಸರಿಯಾಗಿ ಬಳಸಿಕೊಂಡಿದೆಯೇ? ರಾಜ್ಯ ತೀವ್ರ ಸಂಕಷ್ಟ ಎದುರಿಸುತ್ತಿರುವಾಗ ‘ಇಂಡಿಯಾ’ದ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ದೆಹಲಿಯಲ್ಲಿದ್ದರು ಎಂದು ವ್ಯಂಗ್ಯವಾಡಿದರು.