ಪಾಟ್ನಾ: ಬಿಹಾರದ ಜಿಹಾನಾಬಾದ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ಮಾಡಿದ ಪರಿಣಾಮ ಕಾಲ್ತುಳಿತ ಉಂಟಾಗಿ 3 ಮಹಿಳೆಯರು ಸೇರಿ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶ್ರಾವಣ ಮಾಸದ 4ನೇ ಸೋಮವಾರದಂದು ಬರಾವರ್ ಬೆಟ್ಟದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ಅವಘಡದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಸುಮಾರು 35 ಮಂದಿ ಗಾಯಗೊಂಡಿದ್ದಾರೆ.
ಜೆಹಾನಾಬಾದ್ನ ಟೌನ್ ಇನ್ಸ್ಪೆಕ್ಟರ್ ದಿವಾಕರ್ ಕುಮಾರ್ ವಿಶ್ವಕರ್ಮ ಹೇಳುವಂತೆ, 7 ಮೃತದೇಹಗಳನ್ನು ಜೆಹಾನಾಬಾದ್ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರತಿ ವರ್ಷ ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಅದೇ ರೀತಿ ಭಾನುವಾರ ತಡರಾತ್ರಿಯಿಂದಲೇ ಭಕ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಶಿವನಿಗೆ ಜಲಾಭಿಷೇಕ ಅರ್ಪಿಸಲು ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ನೂಕುನುಗ್ಗಲು ಶುರುವಾಗಿತ್ತು. ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಬಲಪ್ರಯೋಗ ನಡೆಸಿದ್ದರಿಂದ ಕಾಲ್ತುಳಿತ ಉಂಟಾಗಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿರುವುದಾಗಿ ಹೇಳಿದ್ದಾರೆ.
ಈ ವೇಳೆ ಆಡಳಿತದ ಅವ್ಯವಸ್ಥೆಯಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ದೇವಾಲಯದಲ್ಲಿ ಹಾಜರಿದ್ದವರು ದೂರಿದ್ದಾರೆ. ಕೆಲವು ಎನ್ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಸ್ವಯಂಸೇವಕರು ಕ್ರೌಡ್ ಮ್ಯಾನೇಜ್ಮೆಂಟ್ನಲ್ಲಿ ತೊಡಗಿರುವ ಭಕ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದರು. ಇದು ನೂಕುನುಗ್ಗಲಿಗೆ ಕಾರಣವಾಯಿತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.