ಬೆಂಗಳೂರು: ಏಳನೇ ಪರಿಷ್ಕೃತ ವೇತನ ಜಾರಿಗೆ ಆಗ್ರಹಿಸಿ ಇಂದಿನಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಜೊತೆಗೆ ನಿನ್ನೆ ಸರ್ಕಾರಿ ನೌಕರರ ಸಂಧಾನ ಸಭೆ ವಿಫಲವಾದ ಕಾರಣ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ಇಂದು ಬಹುತೇಕ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಸರ್ಕಾರಿ ಕಚೇರಿಗಳು ಬಹುತೇಕ ಕಾರ್ಯಸ್ಥಗಿತವಾಗುವ ಸಾಧ್ಯತೆಯೂ ಇದೆ. ರಾಜ್ಯದ ಜನರಿಗೆ ಸರ್ಕಾರಿ ಸೇವೆಗಳು ಸಿಗುವುದು ಅನುಮಾನ.
ಯಾಕೆಂದರೆ ಸುಮಾರು 10 ಲಕ್ಷ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿ ಆಕ್ರೋಶ ಹೊರಹಾಕಲಿದ್ದಾರೆ. ಸರ್ಕಾರದ ಯಾವುದೇ ಇಲಾಖೆಗಳು ಇಂದು ಕಾರ್ಯನಿರ್ವಹಿಸಲ್ಲ. ಸುಮಾರು 42 ಸರ್ಕಾರಿ ಇಲಾಖೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಎಲ್ಲಾ ಕಚೇರಿಗಳು, ಬಿಬಿಎಂಪಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್ ಗಳು, ತಾಲೂಕು ಕಚೇರಿ, ಜಿಲ್ಲಾ ಕಚೇರಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದಾಗಿದೆ.