ಉಡುಪಿ: ವೈದ್ಯ ವಿದ್ಯಾರ್ಥಿನಿಯೊಬ್ಬಳು ಸ್ನಾನ ಮಾಡುವುದನ್ನು ಆಕೆಯ ಮಹಿಳಾ ಸಹಪಾಠಿಗಳೇ ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸರಕಾರ ಮತ್ತು ಪೊಲೀಸ್ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಹಾದಿ ಮನಸ್ಥಿತಿಯ ವಿರುದ್ಧ ನಮ್ಮ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಲ್ಲದೆ ಸರಕಾರ ಬೆದರಿಕೆ ನೀತಿಯನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು, “ಉಡುಪಿಯ ನಮ್ಮ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ರಶ್ಮಿ ಸಾಮಂತ್ ಅವರ ಮನೆಯವರನ್ನು ಭೇಟಿಯಾಗಿದ್ದಾರೆ. ಅವರ ಕುಟುಂಬದ ಜೊತೆಗೆ ನಾವಿದ್ದೇವೆ. ರಶ್ಮಿ ಸಾವಂತ್ ಮತ್ತು ಶೆಪಾಲಿ ವೈದ್ಯ ಅವರು ಯಾವ ಕಾರಣಕ್ಕೂ ಧೈರ್ಯಗೆಡುವ ಅಗತ್ಯವಿಲ್ಲ ನಿಮ್ಮ ಬೆನ್ನಿಗೆ ನಾವಿದ್ದೇವೆ. ಸರ್ಕಾರದ ಈ ಜಿಹಾದಿ ಮನಸ್ಥಿತಿಯ ವಿರುದ್ಧ ನಮ್ಮ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ” ಎಂದಿದ್ದಾರೆ.
“ಉಡುಪಿಯ ಕಾಲೇಜಿನಲ್ಲಿ ನಡೆದ ಅಮಾನುಷ ಘಟನೆ ಬಗ್ಗೆ ಸುಮ್ಮನಿರುವ ಸರ್ಕಾರವನ್ನು ಪ್ರಶ್ನಿಸಿದ, ಹಿಂದೂ ವಿದ್ಯಾರ್ಥಿಗಳ ಪರ ಧ್ವನಿಯಾದ ರಶ್ಮಿ ಸಾವಂತ್ ಅವರ ಮನೆಗೆ ರಾಜ್ಯದ ತುಘಲಕ್ ಸರ್ಕಾರವು ಪೋಲಿಸರನ್ನು ಕಳುಹಿಸಿ ಬೆದರಿಸುವ ತಂತ್ರ ಮಾಡಿದೆ! ಆದರೆ ಫೇಕ್ ನ್ಯೂಸ್ ಎಂದು ಸುಳ್ಳು ಹಬ್ಬಿಸುವರಿಗೆ ರಾಜ ಮರ್ಯಾದೆ ಕೊಡುತ್ತಿದೆ ರಾಜ್ಯ ಸರ್ಕಾರ” ಎಂದು ಆರೋಪ ಮಾಡಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)