ಮೈಸೂರು: ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಕರ್ನಾಟಕ ರಾಜ್ಯ ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷ ಈಗ ಲೋಕಸಭೆ ಗೆಲ್ಲಲು ರಣತಂತ್ರ ರೂಪಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋತೇ ಸೋಲುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೆಲ್ಲುವುದಕ್ಕಾಗಿ ರಾಜ್ಯದಲ್ಲಿ ಉಚಿತ ಯೋಜನೆಗಳನ್ನು ನೀಡಿದಂತೆ ಕೇಂದ್ರದಲ್ಲಿ ರಸಗೊಬ್ಬರ, ಪೆಟ್ರೋಲ್- ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಸುವ ಭರವಸೆ ನೀಡಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿ 20 ಲೋಕಸಭಾ ಸ್ಥಾನ ಗೆಲ್ಲುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿಯರಿಗೆ 2000 ರೂ ಉಚಿತ, 200 ಯುನೀಟ್ ವಿದ್ಯುತ್ ಫ್ರೀ , ಯುವಕರಿಗೆ ನಿರುದ್ಯೋಗಿ ಭತ್ಯೆ, ೧೦ ಕೆಜಿ ಅಕ್ಕಿ …..ಹೀಗೆ ಹಲವು ಗ್ಯಾರಂಟಿಗಳನ್ನು ನೀಡಿ ರಾಜ್ಯದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಗದ್ದುಗೆ ಏರಿದ ಕಾಂಗ್ರೆಸ್ ಪಕ್ಷ ಈಗ ಲೋಕಸಭೆ ಗೆಲ್ಲಲು ಇನ್ನಿಲ್ಲದಂತೆ ಪ್ಲಾನ್ ಮಾಡುತ್ತಿದೆ. ಲೋಕಸಭಾ ಚುನಾವಣೆಗೆ ಉಚಿತ ಯೋಜನೆ ನೀಡುವ ಬದಲಾಗಿ ಬೆಲೆ ಇಳಿಸಿ ಜನರ ಮನ ಗೆಲ್ಲುವ ರಣತಂತ್ರ ರೂಪಿಸುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಸುಳಿವು ನೀಡಿದ್ದಾರೆ. ತಮ್ಮ ತವರು ಕ್ಷೇತ್ರ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಬಿಳಿಗುಳಿ ಗ್ರಾಮದ ಬಳಿ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಲೆ ಇಳಿಸುವ ಭರವಸೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಭಾಷಣ ಮಾಡುವ ವೇಳೆಯಲ್ಲಿ ರಸಗೊಬ್ಬರ ಇಳಿಸಿ ಎಂದು ಮತದಾರನೊಬ್ಬ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಸಗೊಬ್ಬರ ಬೆಲೆ ಇಳಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸೋಲುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಬೆಲೆ ಇಳಿಸುವುದಾಗಿ ಭರವಸೆ ನೀಡಿದ್ರು. ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಚುನಾವಣೆಯಲ್ಲಿ ತಮ್ಮನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ, ಇದು ನನ್ನ ಗೆಲುವಲ್ಲ ನಿಮ್ಮೆಲ್ಲರ ಗೆಲುವು ಎಂದರು. ತಾವು ಬದುಕಿರುವವರೆಗೂ ವರುಣಾ ಕ್ಷೇತ್ರದ ಮತದಾರರಿಗೆ ಋಣಿ ಎಂದರು. ಸಮಾವೇಶಕ್ಕೂ ಮುನ್ನ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿಯಾಗಲಿದೆ. ಮುಂದಿನ ದಿನಗಳಲ್ಲಿ 200 ಯುನಿಟ್ ಯೋಜನೆಗೆ ಗುಲ್ಬರ್ಗಾದಲ್ಲಿ, 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯನ್ನು ಮೈಸೂರಿನಲ್ಲಿ ಸಮಾವೇಶ ನಡೆಸಿ ಚಾಲನೆ ನೀಡುವುದಾಗಿ ಹೇಳಿದ್ರು.