ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು ಸಾರ್ವಜನಿಕರನ್ನು ರಕ್ಷಣೆ ಮಾಡುವ ಪೊಲೀಸ್ ಇಲಾಖೆಗೂ ರಕ್ಷಣೆ ಕೊಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದನ್ನು ನೋಡಿದರೆ ರಾಜ್ಯದಲ್ಲಿ ಚುನಾಯಿತ ಸರಕಾರ ಇದೆಯೇ ಎಂದು ಪ್ರಶ್ನಿಸುವಂತಾಗಿದೆ ಎಂದು ವಿಧಾನಸಭಾ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯಲ್ಲಿ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸರಕಾರಕ್ಕೆ ಒಂದು ವರ್ಷ ತುಂಬಿದೆ. ರಾಜ್ಯದ ಜನರಿಗೆ ಭ್ರಮನಿರಸನ ಉಂಟು ಮಾಡಿದೆ. ಶೂನ್ಯ ಸಾಧನೆ ಸಾಬೀತಾಗಿದೆ. ಸರಕಾರ ಜನರ ಜೀವ, ಆಸ್ತಿಪಾಸ್ತಿಯ ರಕ್ಷಣೆ ಪ್ರಾಥಮಿಕ ಜವಾಬ್ದಾರಿ. ಅದನ್ನು ಮರೆತಿರುವ ಕಾಂಗ್ರೆಸ್ ಸರಕಾರ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದ ಸ್ಥಿತಿಗೆ ತಂದಿದೆ. ಅಲ್ಲದೇ ಜನರ ಜೀವ ರಕ್ಷಣೆಗೆ ಮಾಡುವ ಪೊಲೀಸ್ ಇಲಾಖೆಗೆಗ್ಯಾರಂಟಿಯಿಲ್ಲ. ಅವರ ರಕ್ಷಣೆಗೆ ಯಾರಾದರೂ ಬೇಕು ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಚೆನ್ನಗಿರಿ ಪೊಲೀಸ್ ಠಾಣೆ ಧ್ವಂಸ ಪ್ರಕರಣ ಆಡಳಿತದಲ್ಲಿ ಕಾನೂನು ವ್ಯವಸ್ಥೆ ಇದೆಯೇ ಎಂಬ ಸಂಶಯ ಮೂಡಿದೆ ಎಂದು ಆಕ್ಷೇಪಿಸಿದ್ದಾರೆ.
ಈ ಹಿಂದೆಯೂ ಕಾಂಗ್ರೆಸ್ ಸರಕಾರವಿದ್ದಾಗ ಕೆ. ಜೆ. ಹಳ್ಳಿ, ಡಿ. ಜೆ. ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಸ್ಥಳಗಳಲ್ಲಿ ಠಾಣೆ ಧ್ವಂಸ ಸಾರ್ವಜನಿಕ ಆಸ್ತಿ ಹಾನಿ ಮಾಡುವಾಗಲೂ ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಂಡರೆ ವಿನಃ ತಪ್ಪಿತಸ್ಥರನ್ನು ಶಿಕ್ಷಸಲಿಲ್ಲ. ಈಗಲೂ ಚೆನ್ನಗಿರಿಯಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಇಲಾಖೆಯ ನೈತಿಕ ಶಕ್ತಿಯನ್ನು ಉಡುಗಿಸಿದ್ದಾರೆ. ಈ ಸರಕಾರ ಓಲೈಕೆ ರಾಜಕಾರಣಕ್ಕೆ, ಮತ ಬ್ಯಾಂಕ್ ಭದ್ರತೆ ಮಾಡಿಕೊಳ್ಳುವಲ್ಲಿ ಮಗ್ನವಾಗಿದೆ ಎಂದು ದೂರಿದ್ದಾರೆ.