ಬೆಂಗಳೂರು: ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇಲಾಖೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಡಿಕೆಶಿ, ಸದ್ಯ ಬೆಂಗಳೂರು ಜಲಮಂಡಳಿಯ ಸ್ಥಿತಿ ಚಿಂತಾಜನಕವಾಗಿದೆ. 2014ರಿಂದ ಈವರೆಗೆ ನೀರು ಬಳಕೆ ಶುಲ್ಕ ಹೆಚ್ಚಳ ಮಾಡಿಲ್ಲ. ಹೀಗಾಗಿ ಜಲಮಂಡಳಿ ಆದಾಯ ತೀರಾ ಕಡಿಮೆಯಿದ್ದು, ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಹೀಗಾಗಿ ನೀರಿನ ಶುಲ್ಕ ಹೆಚ್ಚಳ ಸೇರಿ ಜಲಮಂಡಳಿಯನ್ನು ಆರ್ಥಿಕವಾಗಿ ಸಬಲಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜಲಮಂಡಳಿ ಬಳಿ ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ನೀಡಲೂ ಹಣವಿಲ್ಲದಂತಾಗಿದೆ.
ಜಲಮಂಡಳಿ ಕಾರ್ಯದ ಬಗ್ಗೆ ಸೂಚನೆ ನೀಡಲು ಬಂದಿದ್ದ ನನಗೆ ಅವರ ಗೋಳು ಕೇಳುವಂತಾಯಿತು. ಬೆಸ್ಕಾಂನಿಂದ ರಿಯಾಯಿತಿ ದರದಲ್ಲಿ ಜಲಮಂಡಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ.
ಆದರೆ, ಜಲಮಂಡಳಿಗೆ ವಾರ್ಷಿಕ 104 ಕೋಟಿ ಆದಾಯ ಬಂದರೆ 95 ಕೋಟಿ ವಿದ್ಯುತ್ ಬಿಲ್ ಪಾವತಿಗೇ ವ್ಯಯಿಸಬೇಕಾದ ಪರಿಸ್ಥಿತಿಯಿದೆ. ಇದರಿಂದಾಗಿ ಬೃಹತ್ ಯೋಜನೆಗಳೆಲ್ಲವನ್ನೂ ಸಾಲ ಪಡೆದೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.