ಸೌತ್ ಸಿನಿ ಇಂಡಸ್ಟ್ರಿಯಲ್ಲಿ ತಮಿಳ್ ರಾಕರ್ಸ್ ಹೆಚ್ಚಿನ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದ ಸಿನಿಮಾಗಳನ್ನು ಕೆಲವೇ ಸೆಕೆಂಡ್ನಲ್ಲಿ ಹ್ಯಾಕ್ ಮಾಡಿ ವೆಬ್ಸೈಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಇದರಿಂದ ನಿರ್ಮಾಪಕರು ರಾಕರ್ಸ್ ಅಡ್ಮಿನ್ ಗಳಿಗೆ ಹಿಡಿ ಶಾಪ ಹಾಕುತ್ತಿದ್ದು ಪೊಲೀಸ್ ಠಾಣೆ ಮೆಟ್ಟಿಲೂ ಏರಿದ್ದಾರೆ.
ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಥಿಯೇಟರ್ ಪ್ರಿಂಟ್ ಮತ್ತು ಕೆಲ ದಿನಗಳ ನಂತರ ಹೆಚ್ಡಿ ಕ್ವಾಲಿಟಿಯಲ್ಲಿ ಸಿನಿಮಾಗಳು ಮೊಬೈಲ್ಗಳಿಗೆ ಬಂದುಬಿಡುತ್ತದೆ. ಇನ್ನು ಕೆಲವೊಮ್ಮೆ ಈ ಸಿನಿಮಾಗಳನ್ನು ಸಿಡಿ ರೂಪದಲ್ಲಿಯೂ ಮಾರಾಟ ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರು ಥಿಯೇಟರ್ಗಿಂತ ಮೊಬೈಲ್ನಲ್ಲಿಯೇ ಹೆಚ್ಚಾಗಿ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇದರಿಂದ ಥಿಯೇಟರ್ನಲ್ಲಿ ಜನರು ಬಾರದೆ ನಿರ್ಮಾಪಕರು ಭಾರೀ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಬಹುತೇಕರು ಪೊಲೀಸ್ ಠಾಣೆಗೆ ಪೈರಸಿ ವಿರುದ್ಧ ದೂರುಗಳನ್ನು ನೀಡಿದ್ದಾರೆ.
ಆದ್ರೆ ಪೊಲೀಸರು ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಪೊಲೀಸರು ಮಧುರೈನಲ್ಲಿ ತಮಿಳ್ ರಾಕರ್ಸ್ ವೆಬ್ಸೈಟ್ ಅಡ್ಮಿನ್ನನ್ನು ಬಂಧಿಸುವ ಮೂಲಕ ನಿರ್ಮಾಪಕರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿರುವ ಏರಿಯಾಸ್ ಥಿಯೇಟರ್ನಲ್ಲಿ ನಟ ಧನುಷ್ ಅಭಿನಯದ ರಾಯನ್ ಚಿತ್ರದ ರೆಕಾರ್ಡಿಂಗ್ ಮಾಡುತ್ತಿದ್ದಾಗ ತಮಿಳ್ ರಾಕರ್ಸ್ ಸೈಟ್ ನ ಅಡ್ಮಿನ್ ಸ್ಟೀಫನ್ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸ್ಟೀಫನ್ ರಾಜ್ ಕೆಲವೊಂದು ರಹಸ್ಯ ಸಂಗತಿಗಳನ್ನು ಬಾಯಿಬಿಟ್ಟಿದ್ದಾನೆ.
ಸ್ಟೀಫನ್ ಒಂದು ವರ್ಷಗಳಿಂದಲೂ ಹೊಸ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಮೊದಲಿಗೆ ಬಂದು ಸೀಟಿನಲ್ಲಿ ಚಿಕ್ಕ ಕ್ಯಾಮೆರಾ ಅಳವಡಿಸಿ ಹೊಸ ಚಿತ್ರಗಳ ವಿಡಿಯೋ ತೆಗೆಯುತ್ತಿದ್ದ ಎಂದು ಹೇಳಿದ್ದಾನೆ. ಒಂದು ವರ್ಷದಿಂದಲೂ ಹೊಸ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದೇನೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಚಿತ್ರವೊಂದಕ್ಕೆ 5 ಸಾವಿರ ರೂಪಾಯಿ ಕಮಿಷನ್ ಪಡೆದು ವೆಬ್ಸೈಟ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದುದ್ದಾಗಿ ಹೇಳಿಕೊಂಡಿದ್ದಾನೆ.