ಮಂಡ್ಯ:- ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಆಗಿ ಗಲಾಟೆ ಆಗಿರುವ ಘಟನೆಗೆ ಸಂಬಂಧಿಸಿದಂತೆ ಮಂಡ್ಯ ಸಂಸದ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಗಲಾಟೆಯ ಮಾಹಿತಿ ನನಗೆ ರಾತ್ರಿ 9 ಗಂಟೆ ಸುಮಾರಿಗೆ ಗೊತ್ತಾಯಿತು. ಆ ಕೂಡಲೇ ಮಂಡ್ಯ ಎಸ್ಪಿಗೆ ಫೋನ್ ಮಾಡಿ ಕೇಳಿದೆ ಎಂದರು.
ಎರಡೂ ಗುಂಪುಗಳಿಂದ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನ ಹತೋಟಿಗೆ ತೆಗೆದುಕೊಳ್ಳಲು ಪೊಲೀಸರಿಗೆ ಸೂಚಿಸಿದೆ. ಘಟನಾ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡುತ್ತೇನೆಂದು ಹೇಳಿದ್ದಾರೆ. ಇಂಥ ವಾತಾವರಣಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ.
ಮಂಡ್ಯದಲ್ಲಿ ಇಂತಹ ಘಟನೆಗೆ ಅವಕಾಶ ಇರಲಿಲ್ಲ. ಸ್ಥಳೀಯ ಜನತೆಗೆ ಯಾರೋ ಮಾಡಿದ್ದಕ್ಕೆ ನೀವು ಬಲಿಯಾಗಬೇಡಿ ಎಂದು ನನ್ನ ಕಳಕಳಿಯಿಂದ ಮನವಿ ಮಾಡುತ್ತೇನೆ. ಸೌಹಾರ್ದಯುತವಾಗಿ ಮೆರವಣಿಗೆ ನಡೆಯಬೇಕಾಗಿತ್ತು. ಇಂಥ ದಬ್ಬಾಳಿಕೆಯಿಂದ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ನಾಗಮಂಗಲದಲ್ಲಿ ತಲ್ವಾರ್ ಹೊರತಂದು ತೋರಿಸಿದ್ದಾರೆ. ಶಾಂತಿ-ಸೌಹಾರ್ದತೆ ತರಲು ಈ ಸರ್ಕಾರ ಕ್ರಮ ವಹಿಸಬೇಕು. ನಾವು ಏನೇ ಮಾಡಿದ್ರೂ ಸರ್ಕಾರ ನಮ್ಮ ಪರವಾಗಿದೆ. ನಾನೇ ಖುದ್ದಾಗಿ ನಾಗಮಂಗಲಕ್ಕೆ ಹೋಗ್ತೇನೆ. ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವೆ ಎಂದರು.