ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅವರು ಅಮೆರಿಕದಲ್ಲಿ ದೇಶದ ಪ್ರಜಾಪ್ರಭುತ್ವದ (Indian Democracy) ಕುರಿತು ನೀಡಿರುವ ನಕಾರಾತ್ಮಕ ಹೇಳಿಕೆಗೆ ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿದ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ತಮ್ಮ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಭಾರತ ವಿರುದ್ಧವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಭಾರತೀಯ ಪ್ರಜಾಪ್ರಭುತ್ವವು ಜಾಗತಿಕ ಒಳಿತಿಗೆ ಪೂರಕವಾದದ್ದಾಗಿದೆ. ಆದರೆ ಅದರ ಕುಸಿತವು ಪ್ರಪಂಚದ ಮೇಲೆ ಪರಿಣಾಮ ಬೀರಲಿದೆ. ಇದನ್ನು ನಾವು ಅರ್ಥಮಾಡಿಕೊಂಡು, ಸ್ವೀಕರಿಸಬೇಕಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು ನಮ್ಮ ಕೆಲಸ ಎಂದು ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಧರ್ಮೇಂದ್ರ ಪ್ರಧಾನ್, ನಿಮ್ಮ (ರಾಹುಲ್ ಗಾಂಧಿ) ಹೋರಾಟ ಬಿಜೆಪಿಯ ವಿರುದ್ಧ ಆಗಿದ್ದರೆ, ದೇಶದೊಳಗೆ ಇರುವ ವೇದಿಕೆಗಳಲ್ಲಿ ಸಾಕಷ್ಟು ಹೋರಾಡಿ. ಆದರೆ ವಿದೇಶಗಳಲ್ಲಿ ದೇಶವನ್ನು ಮತ್ತೆ ಮತ್ತೆ ಅವಮಾನಿಸುವುದನ್ನು ನಿಲ್ಲಿಸಿ. ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಉಲ್ಲೇಖಿಸಿದ್ದಾರೆ.