ಹುಬ್ಬಳ್ಳಿ: ಮದ್ವೆಯಾಗಿ 8 ವರ್ಷಗಳ ಮ್ಯಾಲ್ ಹುಟ್ಟಿದ ಮಗಾನ್ರೀ ಅವ್ನು. ಮಕ್ಕಳಾಗಿಲ್ಲ ಅಂತ ಕಂಡಕಂಡ ದೇವ್ರಿಗೆ ಹರಕೆ ಹೊತ್ತಿದ್ದೀವ್ರಿ. ಇದ್ದೊಂದ ಮಗನ ಕಳ್ಕೊಂಡ ಹೇಗಿರಬೇಕ್ರಿ. ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಗ್ರಾಮದ ಶಾಲೆಯಲ್ಲಿ ಕೊಠಡಿಯ ಗೋಡೆ ಕುಸಿದು ಮೃತಪಟ್ಟ ಬಾಲಕ ವಿಶ್ರುತ್ನ ತಂದೆ ಫಕ್ಕಿರೇಶ ಬಳಗಲಿ ಅವರ ನೋವಿನಿಂದ ಆಡಿದ ಮಾತುಗಳಿವು. ಮಗನ ಶವ ಒಯ್ಯಲು ಕಿಮ್ಸ್ ಶವಾಗಾರಕ್ಕೆ ಬಂದಿದ್ದ ಅವರ ರೋದನ, ಕಲ್ಲು ಹೃದಯದವರನ್ನೂ ಕರಗಿಸುವಂತಿತ್ತು. ಒಮ್ಮೆ ‘ಮಗನೇ ಬಿಟ್ಟೋದೆಯಾ’ ಎಂದು ಬಿಕ್ಕಿಬಿಕ್ಕಿ ಅತ್ತರೆ, ಮರುಕ್ಷಣ ಎಲ್ಲವನ್ನೂ ಕಳೆದುಕೊಂಡ ಹತಾಶ ಭಾವದಲ್ಲಿ ಮೌನರಾಗುತ್ತಿದ್ದರು. ಕರುಳ ಕುಡಿ ಕಳೆದುಕೊಂಡ ಅವರ ಸಂಕಟ ಗ್ರಾಮಸ್ಥರ ಕಣ್ಣಾಲಿಗಳನ್ನು ತೇವಗೊಳಿಸಿತ್ತು.
ಶಾಲೆಯು ಆರಂಭವಾಗುತ್ತಿತ್ತು ಆದರೆ, ಬೆಳಿಗ್ಗೆ 9ಕ್ಕೆ ಶಾಲೆಗೆ ಬಂದ ವಿಶ್ರುತ ಶಾಲೆಯ ಪ್ರವೇಶದ್ವಾರ ತೆರೆಯದಿರುವುದು ಗೊತ್ತಾಯಿತು. ತನ್ನ ಮೂವರ ಸ್ನೇಹಿತರ ಜೊತೆಗೆ ಶಾಲೆಯ ಹಿಂಭಾಗದ ಪ್ರವೇಶದ್ವಾರದಿಂದ ಆವರಣ ಪ್ರವೇಶಿಸಿದ. ಎಲ್ಲರೂ ನಿರ್ಮಾಣ ಹಂತದ ಕಟ್ಟಡದತ್ತ ತೆರಳಿದರು. ಅದೇ ವೇಳೆ ಆಸರೆಗೆ ನಿಲ್ಲಿಸಲಾಗಿದ್ದ ಕಟ್ಟಿಗೆ ಕಂಬವು ಸರಿದು, ಗೋಡೆಯು ಇಬ್ಬರ ಬಾಲಕರ ಮೇಲೆ ಬಿದ್ದಿದೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡ ವಿಶ್ರುತ್ಗೆ ರಕ್ತಸ್ತಾವವಾಯಿತು. ಏಳನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಪ್ರಜ್ವಲ್ ನಾಗಾವಿಗೂ ಗಾಯವಾಯಿತು. ತಕ್ಷಣವೇ ಇಬ್ಬರು ಬಾಲಕರು ವಿಶ್ರುತ್ ಮನೆಗೆ ತೆರಳಿ, ಪೋಷಕರಿಗೆ ವಿಷಯ ತಿಳಿಸಿದರು.
‘ಮಗ ಇಟ್ಟಿಗೆಗಳ ಮಧ್ಯೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ. ಅವನ ತಲೆ ಮೇಲೆ ಎರಡು ಕಟ್ಟಿಗೆ ಕಂಬಗಳು ಬಿದ್ದಿದ್ದವು. ರಕ್ತಸಿಕ್ತವಾಗಿದ್ದ ಅವುಗಳನ್ನು ಸರಿಸಿ, ಮಗನನ್ನು ಎರಡೂ ಕೈಲಿ ಎತ್ತಿಕೊಂಡು, ಸ್ಥಳೀಯ ವೈದ್ಯರ ಬಳಿ ಹೋದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ತಕ್ಷಣ ಕಿಮ್ಸ್ಗೆ ಒಯ್ಯಲು ಹೇಳಿದರು. ಆದರೆ, ಕಿಮ್ಸ್ ತಲುಪುವಷ್ಟರಲ್ಲಿ ವಿಶ್ರುತ್ ಕೊನೆಯುಸಿರೆಳೆದಿದ್ದ’ ಎಂದು ಫಕ್ಕಿರೇಶ ತಿಳಿಸಿದರು.
‘ಪತ್ನಿ ವಿಜಯಲಕ್ಷ್ಮಿ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷೆಯಿದ್ದು, ಕಟ್ಟಡದ ಕಳಪೆ ಕಾಮಗಾರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಕಾಮಗಾರಿಯ ಖರ್ಚು–ವೆಚ್ಚದ ದಾಖಲೆ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದರು. ಪದೇ ಪದೇ ವಿಳಂಬ ಮಾಡಿದ ಅವರು, ಅವರು ಶುಕ್ರವಾರ ನೀಡುವುದಾಗಿ ಹೇಳಿದ್ದರು. ಅಷ್ಟರಲ್ಲಾಗಲೇ ಅದೇ ಕಟ್ಟಡದ ಗೋಡೆ ಕುಸಿದು ನನ್ನ ಮಗ ಕಣ್ಮುಚ್ಚಿದ. ಕೂಲಿ ಮಾಡಿ ಬದುಕುತ್ತಿದ್ದ ನಮಗೆ, ಮಗನೇ ದೊಡ್ಡ ಆಸ್ತಿಯಾಗಿದ್ದ’ ಎಂದು ದುಃಖ ತೋಡಿಕೊಂಡರು.
ಗ್ರಾಮಸ್ಥರ ಪಟ್ಟು: ‘ಮೃತ ಬಾಲಕನ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆ ₹25 ಲಕ್ಷ ಪರಿಹಾರ ನೀಡುವವರೆಗೂ ಶವಾಗಾರದಿಂದ ಮೃತದೇಹ ಕೊಂಡೊಯ್ಯುವುದಿಲ್ಲ. ಶವವನ್ನು ತಹಶೀಲ್ದಾರ್ ಕಚೇರಿ ಎದುರು ಇಟ್ಟು ನ್ಯಾಯಕ್ಕಾಗಿ ಪ್ರತಿಭಟಿಸುತ್ತೇವೆ’ ಎಂದು ಕಿರೇಸೂರು ಗ್ರಾಮಸ್ಥರು ಪಟ್ಟುಹಿಡಿದರು.
ಡಿಡಿಪಿಐ ಎ.ಎಸ್. ಕೆಳದಿಮಠ, ತಹಶೀಲ್ದಾರ್ ಪ್ರಕಾಶ ನಾಶಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪರಿಹಾರದ ಭರವಸೆ ನೀಡಿದ್ದರೂ, ಅದಕ್ಕೆ ಒಪ್ಪದ ಗ್ರಾಮಸ್ಥರು, ‘ಬಾಲಕನ ತಂದೆಯ ಖಾತೆಗೆ ಪರಿಹಾರದ ಮೊತ್ತ ತಕ್ಷಣ ಜಮಾ ಮಾಡಬೇಕು. ಕಳಪೆ ಕಾಮಗಾರಿ ನಡೆದಿರುವ ಕುರಿತು ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಾವು ಶವವನ್ನು ಒಯ್ಯುವುದಿಲ್ಲ’ ಎಂದು ಪಟ್ಟು ಹಿಡಿದರು.
ಕಳಪೆ ಕಾಮಗಾರಿ ಆರೋಪ: ‘ವಿವೇಕ ಯೋಜನೆಯಡಿ ನಡೆಯುತ್ತಿರುವ ಶಾಲಾ ಕೊಠಡಿಗಳ ಕಳಪೆ ಕಾಮಗಾರಿ ಕುರಿತು ಇಒ, ಪಿಡಿಒಗಳ ಗಮಕ್ಕೆ ತಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಹೆಬಸೂರು ಶಾಲೆಯಲ್ಲಿ ಕಳಪೆ ಕಾಮಗಾರಿ ಗಮನಕ್ಕೆ ಬಂದು, ಪಿಡಿಒ ಮುಖಾಂತರ ಕೆಲಸ ಸ್ಥಗಿತಗೊಳಿಸಲಾಗಿದೆ. ಕೆರೆಸೂರು ಶಾಲೆ ಕೊಠಡಿಯ ಗೋಡೆ ಅಳತೆಗೆ ತಕ್ಕಷ್ಟು ಸಿಮೆಂಟ್ ಹಾಕದೆ ಕಟ್ಟಲಾಗಿತ್ತು. ಸಿಮೆಂಟ್ ಬದಲು ಎಂ ಸ್ಯಾಂಡ್ನಿಂದ ನಿರ್ಮಿಸಿದಂತಿದೆ. ಲಿಂಟಲ್ ಹಾಕದೆ ಗೋಡೆ ನಿರ್ಮಿಸಿದ್ದಲ್ಲದೆ, ಮೂರು ದಿನವಾದರೂ ಅದಕ್ಕೆ ಕ್ಯೂರಿಂಗ್(ನೀರು ಹಾಕುವ ಪ್ರಕ್ರಿಯೆ) ಮಾಡಿರಲಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.
ಗುತ್ತಿಗೆದಾರ ₹5 ಲಕ್ಷ, ಲೋಕೋಪಯೋಗಿ ಇಲಾಖೆ ₹2 ಲಕ್ಷ ಪರಿಹಾರ ತಕ್ಷಣ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಪ್ರತಿಭಟನೆ ಹಿಂಪಡೆದು ಶವವನ್ನು ಗ್ರಾಮಕ್ಕೆ ಕೊಂಡೊಯ್ದರು.