ಇಂಫಾಲ್: ಜುಲೈನಲ್ಲಿ ಮಣಿಪುರದಲ್ಲಿ (Manipur) ನಡೆದ ಇಬ್ಬರು ವಿದ್ಯಾರ್ಥಿಗಳ (Manipur Students) ಭೀಕರ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ನಾಲ್ವರನ್ನು ಬಂಧಿಸಿದೆ. ಅಲ್ಲದೇ ಇಬ್ಬರನ್ನು ವಶಕ್ಕೆ ಪಡೆದಿದ್ದು, ಅವರ ಫೋಟೋ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ರಾಜ್ಯ ರಾಜಧಾನಿ ಇಂಫಾಲ್ನಲ್ಲಿ ಬಂಧನಕ್ಕೊಳಗಾದ ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ. ವಶಕ್ಕೆ ಪಡೆಯಲಾಗಿರುವ ಇಬ್ಬರು ಹುಡುಗಿಯರು ಎನ್ನಲಾಗಿದೆ. ಬಂಧಿತ ನಾಲ್ವರನ್ನು ಅಸ್ಸಾಂನ (Assam) ಗುವಾಹಟಿಗೆ ರವಾನಿಸಲಾಗಿದೆ.
ಆರೋಪಿಗಳನ್ನು ಪಾವೊಮಿನ್ಲುನ್ ಹಾಕಿಪ್, ಮಲ್ಸಾವ್ನ್ ಹಾಕಿಪ್, ಲಿಂಗ್ನಿಚಾಂಗ್ ಬೈಟ್ ಮತ್ತು ತಿನ್ನೆಖೋಲ್ ಎಂದು ಗುರುತಿಸಲಾಗಿದೆ. ಲಿಂಗ್ನೀಚಾಂಗ್ ಬೈಟ್ ಕೊಲೆಯಾದ ವಿದ್ಯಾರ್ಥಿನಿಯ ಸ್ನೇಹಿತ. ಶಂಕಿತರಲ್ಲಿ ಒಬ್ಬಾಕೆ ಚುರಾಚಂದ್ಪುರ ಮೂಲದ ದಂಗೆಕೋರ ಗುಂಪಿನ ವ್ಯಕ್ತಿಯೊಬ್ಬನ ಪತ್ನಿ ಎಂದು ಹೇಳಲಾಗಿದೆ. ಮಣಿಪುರ ಪೋಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಕ್ರ್ಯಾಕ್ ಘಟಕವು ಶಂಕಿತರನ್ನು ಇಂಫಾಲ್ನಿಂದ 51 ಕಿಮೀ ದೂರದಲ್ಲಿರುವ ಬೆಟ್ಟದ ಜಿಲ್ಲೆ ಚುರಚಂದ್ಪುರದಿಂದ ಸೆರೆಹಿಡಿದಿದೆ.