ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅನಿಲ್ ಕುಮಾರ್ ಹಾಗೂ ಜೆಡಿಎಸ್ ಪಕ್ಷದ ಎಂ. ರವೀಶ್ ಕುಮಾರ್ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ನಗರದ ಆರಾಧ್ಯ ದೈವ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ನಂತರ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ವಿವಿಧ ವಾದ್ಯ ಕಲಾ ತಂಡಗಳೊಂದಿಗೆ, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ, ಜೆಡಿಎಸ್ ಬಾವುಟಗಳನ್ನು ಹಿಡಿದು ಮೆರವಣಿಗೆ ಮೂಲಕ, ಆಗಮಿಸಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ(ಪಿಟಿ),ಮಾಜಿ ಎಂಎಲ್ಎ ಬಸವರಾಜ್ ಮಂಡಿಮಠ, ನಗರ ಸಭೆ ಸದಸ್ಯ ಪ್ರಮೋದ್ ಸೇರಿದಂತೆ, ಜೆಡಿಎಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು.
ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಜನಪದ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿದ್ದು, ಜೆಡಿಎಸ್ ಪಕ್ಷದ ಪಂಚತಂತ್ರ ಯೋಜನೆಗಳಿಂದ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಸರಳವಾಗಿ ನಾಮಪತ್ರ ಸಲ್ಲಿಸಿದರು.ಅಲ್ಲದೆ, ಎಎಪಿ ಪಕ್ಷದ ಬಿ. ಪಾಪಣ್ಣ,ಪಕ್ಷೇತರ ಮಹಿಳಾ ಅಭ್ಯರ್ಥಿ ಮಾರಕ್ಕ ನಾಮಪತ್ರ ಸಲ್ಲಿಸಿದ್ದಾರೆ.