ನವದೆಹಲಿ: ಗರ್ಭದಲ್ಲಿರುವ ಮಗುವಿನ ದ್ರಾಕ್ಷಿ ಗಾತ್ರದ ಹೃದಯಕ್ಕೆ ದೆಹಲಿಯ (Delhi) ಏಮ್ಸ್ (AIIMS) ವೈದ್ಯರು (Doctors) ಕವಾಟ ಹಿಗ್ಗುವಿಕೆಯ ಶಸ್ತ್ರಚಿಕಿತ್ಸೆ (Heart surgery) ನೀಡಿ ಯಶಸ್ವಿಯಾಗಿದ್ದಾರೆ.
ಮೂರು ಬಾರಿ ಗರ್ಭಪಾತವಾಗಿದ್ದ 28 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಗುವಿನ ಹೃದಯದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ವೈದ್ಯರು ಚಿಕಿತ್ಸೆ ಮೂಲಕ ಮಗುವಿನ ಆರೋಗ್ಯ ಸುಧಾರಣೆ ಸಾಧ್ಯ ಎಂದು ತಿಳಿಸಿದ್ದಾರೆ. ನಂತರ ದಂಪತಿ ಚಿಕಿತ್ಸೆಗೆ ಒಪ್ಪಿದ್ದರು.
ಶಸ್ತ್ರಚಿಕಿತ್ಸೆಯ ನಂತರ ತಾಯಿ ಹಾಗೂ ಗರ್ಭದಲ್ಲಿರುವ ಮಗು ಇಬ್ಬರೂ ಕ್ಷೇಮವಾಗಿದ್ದಾರೆ. ಇಬ್ಬರ ಆರೋಗ್ಯದ ಮೇಲೂ ವೈದ್ಯರ ತಂಡ ನಿಗವಹಿಸಿದೆ.
ತಾಯಿಯ ಗರ್ಭದಲ್ಲಿರುವಾಗಲೇ (Womb) ಮಗುವಿನ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಗರ್ಭಾವಸ್ಥೆಯಲ್ಲಿ ಕಾಯಿಲೆಯ ತೀವ್ರತೆ ಕಡಿಮೆ ಇರುವುದರಿಂದ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೋಗ್ಯವಂತ ಮಗು ಪಡೆಯಲು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆಯನ್ನು ಅಲ್ಟ್ರಾ ಸೌಂಡ್ (Ultrasound) ಮೂಲಕವೇ ನಿರ್ವಹಿಸಬೇಕು. ನಿಗದಿತ ಸಮಯದಲ್ಲಿ ಜಾಗರೂಕತೆಯಿಂದ ಚಿಕಿತ್ಸೆ ಮಾಡಿ ಮುಗಿಸಬೇಕು. ಇಲ್ಲವಾದಲ್ಲಿ ಮಗುವಿನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.