ಚಂದ್ರಯಾನ-3 ಮಿಷನ್ (Chandrayaan-3 Mission) ಕಾರ್ಯಾಚರಣೆ ನಿರ್ಣಾಯಕ ಹಂತದಲ್ಲಿದ್ದು, ವಿಕ್ರಮ್ ಲ್ಯಾಂಡರ್ (Vikram Lander) ಚಂದ್ರನ ಮೇಲೆ ಕಾಲಿಡಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಭಾನುವಾರ (ಇಂದು) ಬೆಳಗ್ಗೆ ಅಂತಿಮ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆಯೂ (Deboosting Operation) ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಆಗಸ್ಟ್ 23 ರಂದು ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳಕ್ಕೆ ಕಾಲಿಡಲಿದೆ.
ಆಗಸ್ಟ್ 18ರಂದು ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಶಸ್ವಿಗೊಳಿಸಿತ್ತು. ಲ್ಯಾಂಡರ್ ಮಾಡ್ಯೂಲ್ ತನ್ನ ಕಕ್ಷೆಯನ್ನ 113 ಕಿಮೀ x 157 ಕಿಮೀಗೆ ಇಳಿಸಿದ ಡಿಬೂಸ್ಟಿಂಗ್ ಕಾರ್ಯಾಚರಣೆಗೆ ಯಶಸ್ವಿಯಾಗಿ ಒಳಗಾಗಿತ್ತು.
ಹಾಗೆಯೇ 2ನೇ ಹಾಗೂ ಅಂತಿಮ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಲ್ಯಾಂಡರ್ ಮಾಡ್ಯೂಲ್ ಅನ್ನು ಕಕ್ಷೆಯನ್ನು 25 ಕಿಮೀ x 134 ಕಿಮೀಗೆ ಇಳಿಸಿದೆ. ಮುಂದಿನ ಹಂತದಲ್ಲಿ ಲ್ಯಾಂಡರ್ನ ಆಂತರಿಕ ತಪಾಸಣೆ ನಡೆಯಲಿದೆ. ಆಗಸ್ಟ್ 23 ರಂದು ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ನಡೆದಿದೆ ಎಂದು ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಆಗಸ್ಟ್ 17ರ ಗುರುವಾರ ಮಧ್ಯಾಹ್ನ 1:15 ಗಂಟೆಗೆ ಪ್ರೊಪಲ್ಷನ್ ಮಾಡ್ಯೂಲ್ನಿಂದ ಲ್ಯಾಂಡರ್ ಮ್ಯಾಡ್ಯೂಲ್ (LM) ಯಶಸ್ವಿಯಾಗಿ ಬೇರ್ಪಟ್ಟಿತ್ತು. ಅದಾದ 1 ದಿನಗಳ ಬಳಿಕ ಮೊದಲ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆ ಇಸ್ರೋ ಯಶಸ್ವಿಗೊಳಿಸಿತ್ತು. ಇದೀಗ ಅಂತಿಮ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆ ಯಶಸ್ವಿಗೊಂಡಿದ್ದು, ಮುಂದಿನ ಹಂತವಾಗಿ ಚಂದ್ರನ ಅಂಗಳಕ್ಕಿಳಿಯಲು ಇಸ್ರೋ ಎದುರು ನೋಡುತ್ತಿದೆ.