ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾರವರೊಂದಿಗೆ ಇನಿಂಗ್ಸ್ ಕಟ್ಟುತ್ತಿರುವ ಅನುಭವವನ್ನು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹಂಚಿಕೊಂಡಿದ್ದಾರೆ. ಹಿಟ್ ಮ್ಯಾನ್ ರನ್ನು ಅದ್ಭುತ ನಾಯಕನೆಂದು ಮುಕ್ತ ಕಂಠದಿಂದ ಗುಣಗಾನ ಮಾಡಿರುವ ಜೈಸ್ವಾಲ್
22ರ ಹರಯದ ಎಡಗೈ ಆರಂಭಿಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ರಾಜ್ ಕೋಟ್ ಟೆಸ್ಟ್ ಪಂದ್ಯದಲ್ಲಿ 12 ಸಿಕ್ಸರ್ ಸಿಡಿಸಿ ಹೊಸ ಮೈಲುಗಲ್ಲು ಸ್ಥಾಪಿಸಿರುವ ಐಪಿಎಲ್ ತಾರೆ, ಸರಣಿಯಲ್ಲಿ 2 ದ್ವಿಶತಕ ಹಾಗೂ 3 ಅರ್ಧಶತಕ ಸೇರಿದಂತೆ 712 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಇದೇ ಪ್ರದರ್ಶನಕ್ಕಾಗಿ ಫೆಬ್ರವರಿ ತಿಂಗಳ ಐಸಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
“ರೋಹಿತ್ ಶರ್ಮಾರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದು ತುಂಬಾ ಒಳ್ಳೆಯ ಭಾವನೆ ಮೂಡಿದೆ. ಅವರ ಕ್ಯಾಪ್ಟನ್ಸಿಯಲ್ಲಿ ಆಡಲು ಸಂತೋಷವಾಗುತ್ತದೆ. ಅನುಭವಿ ಆಟಗಾರ ಹಾಗೂ ನಾಯಕನೊಂದಿಗೆ ಹಲವು ಸ್ವಾರಸ್ಯಕರ ಕ್ಷಣಗಳನ್ನು ಕಂಡಿದ್ದೇನೆ. ಅವುಗಳನ್ನೆಲ್ಲಾ ಇಲ್ಲಿ ಹೇಳಲು ಸಾಧ್ಯವಿಲ್ಲ. ಅವೆಲ್ಲಾ ನನ್ನ ಮನಸ್ಸಿನ ಒಳಗೆ ಇರಲಿ. ರೋಹಿತ್ ಶರ್ಮಾ ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರೊಂದಿಗೆ ರೋಹಿತ್ ಶರ್ಮಾ ಹಂಚಿಕೊಳ್ಳುವ ಮಾತುಗಳು, ಅವರು ಬ್ಯಾಟ್ ಮಾಡುವ ರೀತಿ, ಅಲ್ಲದೆ ತಂಡದಲ್ಲಿ ಏನೇ ಸಂಗತಿಗಳು ನಡೆದರೂ ಅವರು ನಮ್ಮೊಂದಿಗೆ ನಿಂತಿರುತ್ತಾರೆ. ಅವರಂತಹ ಅದ್ಭುತ ನಾಯಕನನ್ನು ಹೊಂದಲು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಭವಿಷ್ಯದಲ್ಲಿ ಅವರಿಂದ ಮತ್ತಷ್ಟು ಕಲಿಯುತ್ತೇನೆ,” ಎಂದು ಆರಂಭಿಕ ಆಟಗಾರ ಹೇಳಿದ್ದಾರೆ.