ಧಾರವಾಡ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರವಾಗಿ ಭರ್ಜರಿ ಮತಬೇಟೆ ನಡೆಸಿದರು.
ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಹೆಬ್ಬಳ್ಳಿ ಗ್ರಾಮದ ಶಿವಾಜಿ ಮೂರ್ತಿಯಿಂದ ಬಸ್ ನಿಲ್ದಾಣದವರೆಗೂ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡ ಡಿ.ಕೆ.ಶಿವಕುಮಾರ ಅವರು, ಧಾರವಾಡ ಕ್ಷೇತ್ರದಲ್ಲಿ ದುಃಖದಿಂದ ಬಂದು ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ. ರಾಜ್ಯದ ಇತಿಹಾಸದಲ್ಲೇ ಯಾವತ್ತೂ ಇಂತಹ ನೀಚ ರಾಜಕಾರಣ ನಡೆದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಪ್ರಜಾಪ್ರಭುತ್ವದಲ್ಲಿ ತೀರ್ಪು ಬರೋವರೆಗೂ ಮತಯಾಚನೆಗೆ ಅವಕಾಶ ಇದೆ. ಆದರೆ ವಿನಯ ಕುಲಕರ್ಣಿಗೆ ಇಂತಹ ಶಿಕ್ಷೆ ಬಿಜೆಪಿ ಕೊಟ್ಟಿದೆ. ಇದಕ್ಕೆ ನಾನು, ವಿನಯ ಕುಲಕರ್ಣಿ ಉತ್ತರ ಕೊಡಬೇಕಿಲ್ಲ. ಜನರೇ ಇದಕ್ಕೆ ಉತ್ತರ ಕೊಡಬೇಕು. ನಾನು ಬೆಳಗಾವಿ ಜೈಲಿನಲ್ಲಿದ್ದಾಗ ಕುಲಕರ್ಣಿ ಭೇಟಿಯಾಗಬೇಕು ಎಂದು ಕೋರ್ಟ್ಗೆ ಅರ್ಜಿ ಹಾಕಿದ್ದೆ, ಆದರೆ ನನ್ನ ಅರ್ಜಿ ತಿರಸ್ಕಾರ ಆಗಿತ್ತು. ನೀವು ಇಂತಹ ನೂರು ಕುತಂತ್ರ ಮಾಡಿದರೂ ಏನೂ ಆಗುವುದಿಲ್ಲ. ಕುಲಕರ್ಣಿಯನ್ನು ಸಿಎಂ ವಿರುದ್ಧ ಸ್ಪರ್ಧೆ ಮಾಡಿಸಲು ಬಹಳ ಒತ್ತಡ ಇತ್ತು. ವಿನಯ ಕುಲಕರ್ಣಿ ಅಲ್ಲಿ ಇದ್ದಿದ್ರೆ ಸಿಎಂ ಗೆಲ್ಲಲು ಸಾಧ್ಯವಿರಲಿಲ್ಲ ಎಂದರು.
ಇದಕ್ಕೂ ಮುನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತವನಪ್ಪ ಅಷ್ಟಗಿ ಕೂಡ ಬಿಜೆಪಿ ಶಾಸಕ ಅಮೃತ ದೇಸಾಯಿ ವಿರುದ್ಧ ಹರಿಹಾಯ್ದರು. ಒಟ್ಟಾರೆ ಹೆಬ್ಬಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಪರ ಬಿರುಸಿನ ಪ್ರಚಾರ ಕಾರ್ಯ ನಡೆಸಲಾಯಿತು.