ಬೆಂಗಳೂರು:- ಕಾರ್ತಿಕ ಮಾಸದಲ್ಲಿ ಮಾಂಸಾಹಾರವನ್ನು ಸೇವಿಸುವ ಮಂದಿ ಕಡಿಮೆ. ಇದರ ಪರಿಣಾಮ ಬೆಂಗಳೂರು ಸೇರಿ ಹಲವೆಡೆ ಕೋಳಿ ಬೆಲೆಯಲ್ಲಿ ಕುಸಿತವಾಗಿದೆ.
ಕಳೆದ ಹಲವು ದಿನಗಳಿಂದ ಚಿಕನ್ ಬೆಲೆ 260 ರಿಂದ 300 ರೂಪಾಯಿ ವರೆಗೆ ಇತ್ತು. ಪ್ರಸ್ತುತ ಬೆಂಗಳೂರಿನಲ್ಲಿ 1 ಕೆಜಿ ಚಿಕನ್ ಬೆಲೆ 160 ರೂಪಾಯಿ ಇದೆ.
ಚಿಕನ್ ಲಿವರ್ 120 ರೂಪಾಯಿ ಇದ್ದರೆ, ಬೊನ್ಲೆಸ್ ಚಿಕನ್ 210 ರೂಪಾಯಿ, ನಾಟಿ ಕೋಳಿ 360 ರೂಪಾಯಿ, ಲೈವ್ ಚಿಕನ್ ರೂ. 130 ಹಾಗೂ ಸ್ಕಿನ್ಲೆಸ್ ಚಿಕನ್ ಕೆಜಿಗೆ ರೂ. 200 ರೂಪಾಯಿ ಇದೆ. ಆರ್ಟಿ ನಗರದಲ್ಲಿ ಲೈವ್ ಚಿನ್ ಕೆಜಿಗೆ 130 ರೂಪಾಯಿ ಇದ್ದರೆ, ಲಿವರ್ 105 ರೂಪಾಯಿ, ಸ್ಕಿನ್ಲೆಸ್ 180 ರೂ. ಹಾಗೂ ವಿತ್ ಸ್ಕಿನ್ 150 ರೂಪಾಯಿ ಇದೆ.
ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತಿವೆ. ಕಾರ್ತಿಕ ಮಾಸ, ಹಬ್ಬ ಹರಿದಿನಗಳು ಯಾವುದನ್ನೂ ನಂಬದ ನಾನ್ ವೆಜ್ ಪ್ರಿಯರಿಗೆ ಬೆಲೆ ಕುಸಿತದಿಂದ ಫುಲ್ ಖುಷ್ ಆಗಿದ್ದಾರೆ. ಒಂದು ಕೆಜಿ ಚಿಕನ್ ಖರೀದಿಸುವ ಜಾಗದಲ್ಲಿ ಎರಡ್ಮೂರು ಕೆಜಿ ಚಿಕನ್ ಖರೀದಿಸಿ ವಿವಿಧ ಖಾದ್ಯಗಳನ್ನು ಮಾಡಿಕೊಂಡು ಸವಿಯುತ್ತಿದ್ದಾರೆ. ಆದರೆ ಕೋಳಿ ಮಾಂಸದ ಬೆಲೆ ಕುಸಿತವಾಗಿರುವುದು ಕೋಳಿ ಸಾಕಾಣಿದಾರರು ಕಂಗಾಲಾಗುವಂತೆ ಮಾಡಿದೆ. ಕುಕ್ಕುಟೋದ್ಯಮಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ.
ಫಾರ್ಮ್ಗಳಲ್ಲಿ ಕೋಳಿಗಳನ್ನು ಅತಿ ಕಡಿಮೆ ದರಕ್ಕೆ ಖರೀದಿಸಲಾಗುತ್ತಿದೆ. ಇದರಿಂದ ಕನಿಷ್ಠ ಮೇವಿನ ಬಂಡವಾಳವೂ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹೊಸ ವರ್ಷದ ದೃಷ್ಟಿಯಲ್ಲಿಟ್ಟುಕೊಂಡು ಲಕ್ಷಗಟ್ಟಲೆ ಬಂಡವಾಳ ಹಾಕಿರುವ ಕೋಳಿ ಸಾಕಾಣಿಕೆದಾರರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಏಕಾಏಕಿ ದರ ಇಳಿಕೆಯಿಂದ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.