ಬೆಂಗಳೂರು:- ನಿತ್ಯ ಬಳಸುವ ತೆಂಗಿನಕಾಯಿ ಬೆಲೆ ಏರಿಕೆಯಾಗಿದ್ದು, ಹಬ್ಬದ ಸಮಯದಲ್ಲೇ ಈ ರೀತಿ ಬೆಲೆ ಏರಿಕೆ ಆದ್ರೆ ಹೇಗೆ ಅನ್ನೋ ಹೊಸ ತಲೆನೋವು ಶುರುವಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಒಂದು ಕೆ.ಜಿ ತೆಂಗಿನ ಕಾಯಿ 30ರಿಂದ 35ರೂಪಾಯಿಗೆ ಮಾರಾಟವಾಗುತ್ತಿತ್ತು. ಆದ್ರೆ ಇದೀಗಾ ಅದೇ ತೆಂಗಿನ ಕಾಯಿ 50-57 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನೂ,ಕಳೆದ 2010ರ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದು, ದಸರಾ, ದೀಪಾವಳಿ ಇರುವ ಕಾರಣ ಹಬ್ಬದ ಸಮಯದಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುತ್ತದೆ ಎನ್ನಲಾಗುತ್ತಿದೆ. ಜೊತೆಗೆ ಮುಂದಿನ ಆರು ತಿಂಗಳವರೆಗೆ ಈ ಬೆಲೆ ಏರಿಕೆ ಜನರನ್ನ ಕಾಡಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಬೆಂಗಳೂರಿಗೆ ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಭಾಗದಿಂದಲೂ ತೆಂಗಿನಕಾಯಿ ಆಮದಾಗುತ್ತದೆ. ಆದರೆ ಈ ಬಾರಿ ವಿಪರೀತ ಬಿಸಿಲಿದ್ದ ಕಾರಣ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತರ ಭಾರತಕ್ಕೆ ಸಾಕಷ್ಟು ಎಳನೀರು ರಫ್ತಾಗಿದೆ. ಇದೇ ಕಾರಣದಿಂದಾಗಿ ತೆಂಗಿನ ಕಾಯಿ ಬೆಳೆಯಲ್ಲಿ ಕುಸಿತವಾಗಿದ್ದು ಏಕಾಏಕಿ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ತೆಂಗಿನ ಕಾಯಿ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಹಬ್ಬದ ಹೊಸ್ತಿಲಲ್ಲಿ ಇದ್ದಂತಹ ಗ್ರಾಹಕರಿಗೆ ಈ ಬೆಲೆ ನುಂಗಲಾರದ ತುತ್ತಾಗಿದೆ.
ಇನ್ನು, ಇದು ತೆಂಗಿನ ಕಾಯಿಯ ಕಥೆಯಾದ್ರೆ ಮತ್ತೊಂದೆಡೆ ತರಕಾರಿಗಳ ಬೆಲೆಯು ಕೊಂಚ ಜಾಸ್ತಿಯಾಗಿದೆ.