ಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ನಟನೆಯ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಸುದೀಪ್ ಮುಂದಿನ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಿದ್ದಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದ್ದು, ಈಗಾಗ್ಲೆ ಮೂರು ನಾಲ್ಕು ನಿರ್ದೇಶಕರ ಹೆಸರು ಕೇಳಿ ಬಂದಿದೆ. ಈ ನಡುವೆ ಮತ್ತೊಂದು ಅಚ್ಚರಿಯ ಹೆಸರೂ ಕೇಳಿ ಬಂದಿದೆ. ಈ ಬಾರಿ ಸುದೀಪ್ ತಮಿಳು ಸಿನಿಮಾ ರಂಗದ ಹೆಸರಾಂತ ನಿರ್ದೇಶಕ ವೆಂಕಟ್ ಪ್ರಭು ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆಯೇ ಸುದೀಪ್ ಗಾಗಿ ವೆಂಕಟ್ ಪ್ರಭು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಅದನ್ನು ಗಾಸಿಪ್ ಎನ್ನುವಂತೆ ನಂಬಲಾಗಿತ್ತು. ಇದೀಗ ಸುದೀಪ್ ಅವರ ಆಪ್ತರೇ ಹೇಳುವಂತೆ ಈಗಾಗಲೇ ವೆಂಕಟ್ ಪ್ರಭು ಸ್ಕ್ರಿಪ್ಟ್ ಬರೆಯುವಲ್ಲಿ ಸಕ್ರೀಯರಾಗಿದ್ದು, ಎರಡ್ಮೂರು ಬಾರಿ ಸುದೀಪ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ. ಹಾಗಾಗಿ ಮೊದಲು ವೆಂಕಟ್ ಪ್ರಭು ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಕ್ರಾಂತ್ ರೋಣ ಸಿನಿಮಾದ ನಂತರ ಸುದೀಪ್ ಅವರಿಗಾಗಿಯೇ ನಿರ್ದೇಶಕ ಅನೂಪ್ ಭಂಡಾರಿ ಕೂಡ ಕತೆ ಬರೆಯುತ್ತಿದ್ದರು, ಇತ್ತ ಕಡೆ ನಂದಕಿಶೋರ್ ಕೂಡ ಸುದೀಪ್ ಗಾಗಿ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಈ ನಡುವೆ ರಕ್ಷಿತ್ ಶೆಟ್ಟಿ ಅವರ ಹೆಸರೂ ಕೇಳಿ ಬಂದಿತ್ತು. ಕಬ್ಜ ಸಿನಿಮಾದ ನಂತರ ಸುದೀಪ್ ಗಾಗಿ ಆರ್.ಚಂದ್ರು ಕೂಡ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಯಾರು, ಯಾವಾಗ ಸಿನಿಮಾ ಮಾಡುತ್ತಾರೆ ಎನ್ನುವ ಕೂತುಹಲ ಕ್ರಿಯೇಟ್ ಆಗಿದೆ.
ಸುದೀಪ್ ಸದ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿಸಿಎಲ್ ಪಂದ್ಯದಲ್ಲಿ ಸಕ್ರೀಯರಾಗಿದ್ದಾರೆ. ಸಿಸಿಎಲ್ ಮುಗಿಯುತ್ತಿದ್ದಂತೆಯೇ ಕೆಸಿಎಲ್ ಪಂದ್ಯಾವಳಿ ಆಯೋಜನೆಗೊಂಡಿದೆ. ಎರಡ್ಮೂರು ತಿಂಗಳ ಕಾಲ ಕ್ರಿಕೆಟ್ ಪಂದ್ಯಾವಳಿಯಲ್ಲೇ ಸುದೀಪ್ ಬ್ಯುಸಿಯಾಗಿರಲಿದ್ದಾರೆ. ಹಾಗಾಗಿ ಸುದೀಪ್ ಅವರ ಹೊಸ ಸಿನಿಮಾ ಯಾವಾಗ ಘೋಷಣೆ ಆಗಬಹುದು ಎನ್ನುವ ಕೂತುಹಲ ಅಭಿಮಾನಿಗಳಲ್ಲಿ ಶುರುವಾಗಿದೆ.