ಬೆಂಗಳೂರು: ಒಂದು ತಿಂಗಳು ಕಳೆದರೆ ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Assembly Election 2023) ನಡೆಯುತ್ತೆ. ಪ್ರಮುಖ ಮೂರು ಪಕ್ಷಗಳು ಅಖಾಡಕ್ಕೆ ಸಿದ್ದವಾಗಿವೆ. ಹಾಗೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಬ್ಯುಸಿಯಾಗಿವೆ. ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ (BJP) ಮಹತ್ತರವಾದ ಬೆಳವಣಿಗೆ ನಡೆದಿದೆ. ಚುನಾವಣೆ ಹೊಸ್ತಿಲಿನಲ್ಲಿ ನಟ ಕಿಚ್ಚ ಸುದೀಪ್ (Kichcha Sudeep), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರೊಂದಿಗೆ (CM Basavaraj Bommai) ಜಂಟಿ ಸುದ್ದಿಗೋಷ್ಠಿ ನಡೆಸಿ, ನನ್ನ ಬೆಂಬಲ ಸಿಎಂ ಬೊಮ್ಮಾಯಿಯವರಿಗೆ ಎಂದಿದ್ದಾರೆ. ಇದು ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಹೀಗಿರುವಾಗ ಸಿಎಂ ಬೊಮ್ಮಾಯಿ ಅವರಿಗೆ ನಟ ಸುದೀಪ್ ಬೆಂಬಲ ಘೋಷಿಸಿದ ವಿಚಾರವಾಗಿ ರಾಜ್ಯ ಕಾಂಗ್ರೆಸ್ (Congress) ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.
“ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿದರೂ ವೋಟು ಗಿಟ್ಟುವುದಿಲ್ಲ. ಸಿಎಂ ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಟರ ಮೊರೆ ಹೋಗಿದೆ!. ಬಿಎಸ್ ಯಡಿಯೂರಪ್ಪ ಅವರ ಮುಖವನ್ನು ಮರೆಮಾಚಲು ಬಿಜೆಪಿ ಮುಂದಾಗಿದೆ. ಬಿಜೆಪಿಗೆ ಈಗ ವರ್ಚಸ್ಸು ನಾಯಕರಿಲ್ಲದಿರುವುದು ದುರಂತ” ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಹರಿಹಾಯ್ದಿದೆ.