ಹೊಟ್ಟೆಯ ಆಮ್ಲೀಯತೆ ಸಮಸ್ಯೆ ಹಲವರನ್ನು ಕಂಗೆಡಿಸುತ್ತದೆ. ಹೊಟ್ಟೆಯ ಆಮ್ಲವು ಅನ್ನನಾಳದ ಕಡೆ ತಿರುಗಿ ಉರಿ ಎಬ್ಬಿಸುವ ಸ್ಥಿತಿ ಇದು.
ಹೆಚ್ಚಾದರೆ ಗಂಭೀರ ಕಾಯಿಲೆಗಳಿಗೂ ಕಾರಣವಾಗಬಹುದು. ನಮ್ಮ ದೇಹ ಕೆಲವೊಮ್ಮೆ ಹಲವು ವಿಧಾನಗಳಲ್ಲಿ ನಮ್ಮ ಜೀವನಶೈಲಿಯ ಬಗ್ಗೆ ಎಚ್ಚರಿಕೆ ನೀಡುತ್ತದೆ. ಆಹಾರದ ವಿಚಾರದಲ್ಲಿ ಕಾಳಜಿ ವಹಿಸುವಂತೆ ಸೂಚನೆ ನೀಡುತ್ತಿರುತ್ತದೆ. ಅಂಥದ್ದೇ ಸೂಚನೆಗಳಲ್ಲಿ ಒಂದು ಈ ಆಸಿಡ್ ರಿಫ್ಲಕ್ಸ್. ಈ ಸಮಸ್ಯೆ ಉಂಟಾದಾಗ ಎದೆಯ ಭಾಗದಲ್ಲಿ ಉರಿಯಾಗುತ್ತದೆ. ಕುತ್ತಿಗೆಯವರೆಗೂ ಉರಿ ಬರಬಹುದು. ಬಾಯಿಯಿಂದ ಕೆಟ್ಟ ವಾಸನೆ ಬರಬಹುದು ಹಾಗೂ ಬಾಯಿಯಲ್ಲಿ ಕೆಟ್ಟ ರುಚಿ ತುಂಬಿಕೊಳ್ಳಬಹುದು. ಹೊಟ್ಟೆ ತುಂಬಿಕೊಂಡಿರುವ ಭಾವನೆ ಮೂಡಬಹುದು. ಈ ಸಮಸ್ಯೆ ಹೆಚ್ಚಾದರೆ, ಮಲದಲ್ಲಿ ರಕ್ತವೂ ಬೀಳಬಹುದು. ಕುತ್ತಿಗೆಯಲ್ಲೇ ಆಹಾರ ಸಿಲುಕಿಕೊಂಡಿದೆ ಎನ್ನಿಸಲೂಬಹುದು. ಬಿಕ್ಕಳಿಕೆ, ಅನಾರೋಗ್ಯದ ಭಾವನೆ ಹೆಚ್ಚಾಗಬಹುದು. ನಿರಂತರವಾಗಿ ಹೀಗಾಗುತ್ತಿದ್ದರೆ ತೂಕ ಕಡಿಮೆಯಾಗಬಹುದು. ಅಸ್ತಮಾದಂತೆ ಉಸಿರಾಟದ ತೊಂದರೆಯೂ ಕಾಣಿಸಬಹುದು.
ಒತ್ತಡದಿಂದಾಗಿ ಎದೆಯಲ್ಲಿ ಉರಿಯಾಗುತ್ತಿದೆ ಎಂದು ಭಾವಿಸುವುದೂ ಹೆಚ್ಚು. ದೀರ್ಘಕಾಲದ ಒತ್ತಡದಿಂದ ಆಸಿಡ್ ರಿಫ್ಲಕ್ಸ್ ಆರಂಭವಾಗಬಹುದು, ಹೆಚ್ಚಾಗಬಹುದು. ಆದರೆ, ಆರಂಭಿಕ ಹಂತದಲ್ಲಿ ಅದು ಒತ್ತಡದಿಂದ ಉಂಟಾಗಿರುವುದಿಲ್ಲ. ಇದರ ನಿವಾರಣೆಗೆ ಯೋಗದ ಹಲವು ಆಸನಗಳು ಭಾರೀ ಸಹಕಾರಿಯಾಗಿವೆ. ಯೋಗದ ಹಲವು ಆಸನಗಳಿಂದ ನೇರವಾಗಿ ಪ್ರಯೋಜನ ಕಾಣಬಹುದು. ಈ ಕುರಿತು ಅಧ್ಯಯನಗಳೂ ನಡೆದಿವೆ. ನಿರ್ದಿಷ್ಟ ಉಸಿರಾಟದ ಕ್ರಮ, ಹೊಟ್ಟೆಯನ್ನು ಹಿಗ್ಗಿಸುವ-ಕುಗ್ಗಿಸುವ ಪ್ರಕ್ರಿಯೆಯಿಂದಾಗಿ ಹೊಟ್ಟೆಯ ಆಮ್ಲ ಅನ್ನನಾಳದವರೆಗೂ ಬಾರದಂತೆ ನೋಡಿಕೊಳ್ಳಬಹುದು. ಕುತ್ತಿಗೆ, ಎದೆ, ಭುಜಗಳಲ್ಲಿನ ಒತ್ತಡ ನಿವಾರಣೆಯಾಗುತ್ತದೆ. ಜತೆಗೆ, ಹೊಟ್ಟೆಯ ಮಾಂಸಖಂಡಗಳಿಗೂ ಅನುಕೂಲವಾಗಿವೆ. ಈ ಆಸನಗಳು ಕೇವಲ ತಾತ್ಕಾಲಿಕ ಪರಿಹಾರಗಳಲ್ಲ. ನಿಯಮಿತವಾಗಿ ಮಾಡುತ್ತಿದ್ದರೆ ದೀರ್ಘಕಾಲದ ಆಸಿಡಿಟಿ ಸಮಸ್ಯೆಗೂ ಖಂಡಿತ ಪರಿಹಾರ ಕಂಡುಕೊಳ್ಳಬಹುದು.
ಸುಪ್ತಬದ್ಧ ಕೋನಾಸನವು ಆಳವಾದ ಉಸಿರಾಟಕ್ಕೆ ಕಾರಣವಾಗುವುದರಿಂದ ಹೊಟ್ಟೆಯ ಆಮ್ಲ ಅನ್ನನಾಳಕ್ಕೆ ನುಗ್ಗುವುದನ್ನು ತಡೆಯುತ್ತದೆ. ಒತ್ತಡ ಕಡಿಮೆ ಮಾಡುತ್ತದೆ. ಆರಂಭಿಕ ಹಂತದಲ್ಲಿ ಯೋಗ ಮಾಡುವವರಿಗೆ ಇದು ಅತ್ಯಂತ ಸೂಕ್ತವಾದ ಆಸನ. ಬಳಲಿದ ದೇಹಕ್ಕೆ ಈ ಭಂಗಿಯಿಂದ ವಿಶ್ರಾಂತಿ ದೊರೆಯುತ್ತದೆ. ಎದೆ, ಭುಜ, ಪಕ್ಕೆಲುಬು, ಹೊಟ್ಟೆಯ ಸ್ನಾಯುಗಳಿಗೆ ಹಿತಕಾರಿಯಾಗಿದೆ.
ಭುಜಂಗಾಸನ:
ಭುಜಂಗ ಎಂದರೆ ಹೆಡೆ ಎತ್ತಿದ ಸರ್ಪ. ಹೀಗಾಗಿ, ಈ ಆಸನವನ್ನು ಕೋಬ್ರಾ ಪೋಸ್ ಅಂತಲೂ ಹೇಳುತ್ತಾರೆ. ಸೂರ್ಯ ನಮಸ್ಕಾರ ಮಾಡುವಾಗ ಈ ಆಸನವೂ ಜತೆಯಲ್ಲೇ ಇರುತ್ತದೆ. ಈ ಆಸನ ದೇಹದ ಮೇಲ್ಭಾಗವನ್ನು ಹಿಗ್ಗಿಸುತ್ತದೆ. ಸೊಂಟದ ನೋವಿದ್ದರೆ ಶಮನವಾಗುತ್ತದೆ. ಮಹಿಳೆಯರಲ್ಲಿ ಮುಟ್ಟು ನಿಯಮಿತವಾಗುತ್ತದೆ. ಶ್ವಾಸಕೋಶ, ಹೃದಯ ಬಲಗೊಳ್ಳುತ್ತವೆ.
ಉತ್ತಿತ ತ್ರಿಕೋನಾಸನ
ಉತ್ತಿತ ತ್ರಿಕೋನಾಸನವು ಜೀರ್ಣಕ್ರಿಯಯನ್ನು ಬಲಪಡಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ತೊಡೆ, ಮೊಣಕಾಲು, ಎದೆ ಮತ್ತು ಹೊಟ್ಟೆಯನ್ನು ವಿಸ್ತರಿಸುತ್ತದೆ. ಮಾಂಸಖಂಡಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ. ದೇಹಕ್ಕೆ ರಕ್ತ ಪೂರೈಕೆ ಹೆಚ್ಚಿಸುತ್ತದೆ. ಹೀಗಾಗಿ, ರೋಗ ನಿರೋಧಕ ಶಕ್ತಿ ಭಂಗಿಗಳಲ್ಲಿ ಇದೂ ಒಂದಾಗಿದೆ. ಏಕಾಗ್ರತೆಯನ್ನು ಸುಧಾರಿಸುವ ಜತೆಗೆ, ಬೆನ್ನುನೋವನ್ನು ಪರಿಹರಿಸುತ್ತದೆ.