ಬಹುಕೋಟಿ ವಂಚನೆ ಆರೋಪಿ, ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪರ ನಿಂತಿದ್ದಾರೆ. ಮೊನ್ನೆಯಷ್ಟೇ ಕೋರ್ಟಿಗೆ ಬಂದಿದ್ದ ಸುಕೇಶ್, ನಟಿಯ ಬಗ್ಗೆ ಅಚ್ಚರಿ ಎನ್ನುವಂತಹ ಮಾತುಗಳನ್ನು ಆಡಿದ್ದಾನೆ. ತನ್ನ ಮೇಲಿರುವ ಆರೋಪಕ್ಕೂ ಜಾಕ್ವೆಲಿನ್ ಗೂ ಯಾವುದೇ ಸಂಬಂಧವಿಲ್ಲ. ಆಕೆ ಅಮಾಯಕಿ ಎನ್ನುವ ಅರ್ಥದಲ್ಲಿ ಸುಕೇಶ್ ಹೇಳಿಕೆ ನೀಡಿದ್ದಾನೆ.
ಕೋರ್ಟಿನಲ್ಲಿ ಜಾಕ್ವೆಲಿನ್ ಪರ ಮಾತನಾಡಿದ್ದ ಸುಕೇಶ್, ಆಚೆ ಬಂದ ನಂತರ ಪ್ರೇಮಿಗಳ ದಿನಕ್ಕೆ ಆ ನಟಿಗೆ ಶುಭಾಶಯ ಕೋರಿದ್ದ. ಜಾಕ್ವೆಲಿನ್ ತುಂಬಾ ಒಳ್ಳೆಯ ಹುಡುಗಿ. ಆಕೆ ಯಾವ ತಪ್ಪು ಮಾಡಿಲ್ಲ. ಆಕೆಯ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಅದಲ್ಲೆವನ್ನೂ ಎದುರಿಸುವ ಶಕ್ತಿ ಆಕೆಗೆ ಇದೆ ಎಂದು ಹೇಳಿದ್ದ. ಈ ಕೇಸ್ ನಲ್ಲಿ ಆಕೆ ಗೆದ್ದು ಬರುತ್ತಾಳೆ ಎನ್ನುವ ವಿಶ್ವಾಸವನ್ನೂ ವ್ಯಕ್ತ ಪಡಿಸಿದ್ದ.
ಇದೀಗ ಜೈಲಿನಿಂದಲೇ ಸುಕೇಶ್ ಮತ್ತೊಂದು ಸಂದೇಶವನ್ನು ಜಾಕ್ವೆಲಿನ್ ಗೆ ಕಳುಹಿಸಿದ್ದಾನೆ. ‘ಮುಂದಿನ ವರ್ಷ ನಾನು ಚುನಾವಣೆಗೆ ನಿಲ್ಲುತ್ತೇನೆ. ನಾನು ನಿನ್ನನ್ನು ರಕ್ಷಿಸುತ್ತೇನೆ’ ಎಂದು ಅಭಯ ನೀಡಿದ್ದಾನೆ. ಸುಕೇಶ್ ಪ್ರಕರಣದಿಂದಾಗಿ ಜಾಕ್ವೆಲಿನ್ ಕೂಡ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಕೋರ್ಟಿಗೂ ಅಲೆದಾಡುತ್ತಿದ್ದಾರೆ. ಅಲ್ಲದೇ, ಹಲವು ರೀತಿಯಲ್ಲೂ ಅವಮಾನ ಎದುರಿಸಿದ್ದಾರೆ. ಅಲ್ಲದೇ, ಸುಕೇಶ್ ವಿರುದ್ಧವೇ ಅವರು ಮಾತನಾಡಿದ್ದಾರೆ. ಆದರೂ, ಸುಕೇಶ್ ಜೈಲಿನಿಂದಲೇ ಜಾಕ್ವೆಲಿನ್ ಪರ ಮಾತನಾಡಿದ್ದಾನೆ.