ಸ್ಯಾಂಡಲ್ ವುಡ್ ಸಿನಿಮಾ ರಂಗದ ಸೂಪರ್ ಸ್ಟಾರ್ ಅಂಬರೀಶ್ ನಿಧನರಾಗಿ ನಾಲ್ಕು ವರ್ಷ ಕಳೆದಿದೆ. ಇದೀಗ ಅವರ ಸ್ಮಾರಕ ನಿರ್ಮಾಣವಾಗಿದ್ದು ಸ್ಮಾರಕವನ್ನು ಮುಖ್ಯಮಂತ್ರಿ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್ ಹಾಗೂ ಇತರೆ ಗಣ್ಯರು ಉದ್ಘಾಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪತಿಯನ್ನು ನೆನೆದು ಭಾವುಕರಾಗಿ ಮಾತನಾಡಿದ ನಟಿ, ಸಂಸದೆ ಸುಮಲತಾ, ಅಂಬರೀಶ್ ತಮ್ಮ ಜೀವಿತಾವಧಿಯಲ್ಲಿ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದರು. ಇದೀಗ ಅದೇ ಮಾತನ್ನು ಮುಂದಿಟ್ಟುಕೊಂಡು ನಟ ಚೇತನ್ ಮಾತನಾಡಿದ್ದಾರೆ.
ಅಂಬರೀಶ್ ಯಾರ ಬಳಿಯೂ ಕೈಚಾಚಿರಲಿಲ್ಲ ಆದರೆ ಸ್ಮಾರಕ ನಿರ್ಮಾಣಕ್ಕಾಗಿ ಸುಮಲತಾ, ಸರ್ಕಾರದ ಬಳಿ ಕೈಚಾಚಿದ್ದಾರೆ ಎಂದಿದ್ದಾರೆ.
ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಅದಕ್ಕೆ ಖರ್ಚಾಗಿರುವ ಸರ್ಕಾರಿ ಹಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್, ಅನಗತ್ಯವಾಗಿದ್ದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತದ 23.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದು ಚೇತನ್ ಪ್ರಶ್ನೆ ಮಾಡಿದ್ದಾರೆ.
ಅಂಬರೀಶ್ ಅವರ ಸ್ಮಾರಕವನ್ನು ಸರ್ಕಾರವು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಿದೆ. ಒಂದು ಎಕರೆ 34 ಗುಂಟೆ ಪ್ರದೇಶದಲ್ಲಿ ಭವ್ಯವಾಗಿ ಸ್ಮಾರಕ ನಿರ್ಮಾಣವಾಗಿದ್ದು ಇದಕ್ಕೆ ಸುಮಾರು 12 ಕೋಟಿಗೂ ಹೆಚ್ಚಿನ ಮೊತ್ತ ಖರ್ಚಾಗಿದೆ.