ಇಂದು ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ. ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬದವರು, ಸೆಲೆಬ್ರಿಟಿಗಳು, ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಂಬರೀಷ್ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗುತ್ತಿದೆ. ಅಂಬರೀಶ್ ಬರ್ತಡೇ ಪ್ರಯಕ್ತ ಸುಮಲತಾ ಅಂಬರೀಷ್ ಭಾವುಕವಾಗಿ ಪೋಸ್ಟ್ ಬರೆದುಕೊಂಡಿದ್ದಾರೆ.
ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅಂಬರೀಶ್ ಹಾಗೂ ಸುಮಲತಾ ಜೋಡಿ ಪ್ರೀತಿ ಮದುವೆಯಾಗಿದ್ದರು. ಹಲವು ವರ್ಷಗಳ ಕಾಲ ಸಖ ಸಂಸಾರ ನಡೆಸಿದ್ದ ಜೋಡಿಗಳು ಅನಾರೋಗ್ಯದಿಂದ ಅಂಬರೀಷ್ ಮೃತಪಟ್ಟಿದ್ದರು. ಇಂದು ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಅಂಬಿಯನ್ನು ಸುಮಲತಾ ನೆನಪಿಸಿಕೊಂಡಿದ್ದಾರೆ.
‘ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು. ಹಾಗಾಗಿ ನಿಮ್ಮ ಹುಟ್ಟು ಹಬ್ಬ ಅದೊಂದು ಸಡಗರವಾಗಿರುತ್ತಿತ್ತು. ಅದು ನಮಗಷ್ಟೇ ಅಲ್ಲ, ಅಭಿಮಾನಿಗಳ ಪಾಲಿಗೆ ನಿಜವಾದ ಹಬ್ಬ. ಭೌತಿಕವಾಗಿ ನಮ್ಮೊಂದಿಗೆ ನೀವು ಇದ್ದಿದ್ದರೆ, ಇಂದು 71ನೇ ವರ್ಷದ ಹುಟ್ಟು ಹಬ್ಬವನ್ನೂ ಅಭಿಮಾನಿಗಳ ಜೊತೆಯಾಗಿ ಮತ್ತಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದೆವು’ ಎಂದು ಸುಮಲತಾ ಬರೆದುಕೊಂಡಿದ್ದಾರೆ.
‘ಮನೆ ಮುಂದೆ ಜನಸಾಗರ, ನಿಮ್ಮ ಆರ್ಭಟ, ಹಾಸ್ಯ ಪ್ರಜ್ಞೆಯ ಮಾತು, ರಾತ್ರಿ ಇಡೀ ಕಾಯುತ್ತಾ ನಿಂತಿದ್ದ ಅಭಿಮಾನಿಗಳ ಘೋಷಣೆ ಇನ್ನೂ ಹಾಗೆಯೇ ಇದೆ. ಇವತ್ತೂ ಅವೆಲ್ಲವೂ ನಿಮಗೆ ಶುಭಾಶಯ ಹೇಳುತ್ತಿವೆ. ಹ್ಯಾಪಿ ಬರ್ತಡೇ ಮೈ ಅಂಬಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ’ ಎಂದು ಸುಮಲತಾ ಪತಿಯನ್ನು ನೆನಪು ಮಾಡಿಕೊಂಡಿದ್ದಾರೆ.