ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಖಂಡಿತವಾಗಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಅಂತ ಹೇಳಿಕೊಂಡು ಓಡಾಡುತ್ತಿದ್ದ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಚುನಾವಣಾ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ.
ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಬಳಿಕ ಮೊದಲ ಟಾಸ್ಕ್ನಲ್ಲೇ ಸಂಸದೆ ಸುಮಲತಾ ಫೇಲ್ ಆಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಿಕೊಳ್ಳುವಲ್ಲಿ ಸುಮಲತಾ ಅಂಬರೀಷ್ ವಿಫಲವಾಗಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಬಿಜೆಪಿ ಗೆಲ್ಲಿಸುವ ಪಣತೊಟ್ಟಿದ್ದರು. ಆದರೆ, ಹೊರಬಿದ್ದಿರುವ ಫಲಿತಾಂಶ ಸುಮಲತಾಗೆ ಮುಖಭಂಗವಾಗಿದೆ.
ಇನ್ನೂ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ರೆಬೆಲ್ ಲೇಡಿಗೆ ರಾಜಕೀಯ ಭವಿಷ್ಯದ ಭಯ ಶುರುವಾಗಿದೆ. ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದ ಸುಮಕ್ಕಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸಕ್ಕರೆ ನಾಡಿನಲ್ಲಿ ಗೆಲುವು ಸಾಧಿಸುವುದಿರಲಿ ಕನಿಷ್ಠ ಪೈಪೋಟಿ ಕೊಡುವುದಕ್ಕೂ ಬಿಜೆಪಿ ವಿಫಲವಾಗಿದ್ದು, ಸುಮಲತಾ ಅವರಿಗೆ ಮುಂದಿನ ರಾಜಕೀಯ ಹಾದಿ ಕಠಿಣ ಎಂಬಂತೆ ಭಾಸವಾಗುತ್ತಿದೆ.
ಲೋಕಸಭಾ ಚುನಾವಣೆಗೆ ಇನ್ನೊಂದೆ ವರ್ಷ ಬಾಕಿ ಇದೆ. ಈ ಚುನಾವಣೆಯಲ್ಲೂ ಹಿನ್ನೆಡೆ ಅನುಭವಿಸುವ ಭಯ ಸುಮಕ್ಕನಿಗೆ ಕಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್ಗೆ ಸೆಡ್ಡು ಹೊಡೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಹೀನಾಯ ಸೋಲಿನೊಂದಿಗೆ ರಾಜಕೀಯ ಭವಿಷ್ಯವೇ ಕಮರುವ ಭೀತಿಯಲ್ಲಿ ಸುಮಲತಾ ಇದ್ದಾರೆ.