ಲಂಡನ್: ಬ್ರಿಟನ್ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗುತ್ತಿದ್ದು, ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ತಮ್ಮ ಸಂಪುಟದಲ್ಲಿದ್ದ ಭಾರತೀಯ ಮೂಲದವರೇ ಆದ ಸುಯೆಲ್ಲಾ ಬ್ರಾವರ್ಮನ್ (Suella Braverman) ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಹಾಗೆಯೇ ಬ್ರಿಟನ್ ಮಾಜಿ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಪ್ಯಾಲೇಸ್ತೀನ್ ಪರವಾದ ಮೆರವಣಿಗೆಯನ್ನು ಪೊಲೀಸರು ನಿರ್ವಹಿಸಿದ ರೀತಿಯನ್ನು ಸುಯೆಲ್ಲಾ ಬ್ರಾವರ್ಮನ್ ಟೀಕಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಬ್ರಿಟನ್ನಲ್ಲಿ ಕಳೆದ ವಾರ ಪ್ಯಾಲೇಸ್ತೀನ್ ಪರ ಪ್ರತಿಭಟನೆ ನಡೆದಿತ್ತು. ಈ ಮೆರವಣಿಗೆಯನ್ನು ಪೊಲೀಸರು ನಿರ್ವಹಿಸಿದ್ದು ಸರಿಯಾಗಿಲ್ಲ ಎಂದು ಟೀಕಿಸಿ ಸುಯೆಲ್ಲಾ ಲೇಖನವೊಂದನ್ನು ಪ್ರಕಟಿಸಿದ್ದರು.
ಈ ಮೂಲಕ ಅವರು ಉದ್ವಿಗ್ನತೆ ಹೆಚ್ಚಿಸಿದ್ದಾರೆ. ಬಲಪಂಥೀಯರನ್ನು ಲಂಡನ್ನಲ್ಲಿ ಬೀದಿಗಿಳಿಸಲು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡುವಂತೆ ಪ್ರಧಾನಿ ರಿಷಿ ಸುನಕ್ ಮೇಲೆ ಒತ್ತಡ ಕೇಳಿ ಬಂದಿತ್ತು. ಇದಾದ ನಂತರ ಈಗ ಸುನಕ್ ಅವರ ಸಂಪುಟದಿಂದ ಸುಯೆಲ್ಲಾ ಅವರಿಗೆ ಕೊಕ್ ನೀಡಲಾಗಿದೆ.