ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಮತ್ತು ಖುದ್ದು ಹಾಜರಾಗಲು ಕೆಳಹಂತದ ನ್ಯಾಯಾಲಯ ನೀಡಿದ ಸಮನ್ಸ್ಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಹೃಷಿಕೇಶ್ ನೇತೃತ್ವದ ದ್ವಿ ಸದಸ್ಯ ಪೀಠ, ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ ಆರು ವಾರದಲ್ಲಿ ಉತ್ತರಿಸಲು ಸೂಚನೆ ನೀಡಿದೆ.
ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ 2022 ರಲ್ಲಿ ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿನ್ನೆಲೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ಆರೋಪಿಗಳು ನ್ಯಾಯಾಲಯದ ಮುಂದೆ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಗೊಳಿಸಲು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ಅರ್ಜಿದಾರರಿಗೆ ತಲಾ 10,000 ವೆಚ್ಚ ಭರಿಸಲು ಆದೇಶಿಸಿತ್ತು. ಈ ಹಿನ್ನೆಲೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಮತ್ತು ಇತರೆ ನಾಯಕರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿ ಪ್ರಕರಣ ರದ್ದು ಕೋರಿದ್ದರು.
ಇಂದು ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತು. ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ಇದೊಂದು ರಾಜಕೀಯ ಪ್ರತಿಭಟನೆಯಾಗಿದ್ದು, ಕ್ರಿಮಿನಲ್ ಮೊಕದ್ದಮೆಯು ಸಂವಿಧಾನದ 19(1)(ಎ) ವಿಧಿಯಡಿ ಪ್ರತಿಭಟಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲದೆ ಶಾಂತಿಯುತವಾಗಿ ನಡೆಸಿದ ರಾಜಕೀಯ ಪ್ರತಿಭಟನೆಯನ್ನು ದಂಡದ ನಿಬಂಧನೆಗಳನ್ನು ಬಳಸಿ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಇತ್ತ ರಣದೀಪ್ ಸುರ್ಜೆವಾಲ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್,
ಇಂತಹ ಬೆಳವಣಿಗೆ ತುಂಬಾ ಅಪಾಯಕಾರಿ. ಈ ನಿಯಮಗಳಿಂದ ಪ್ರತಿ ಸಾರ್ವಜನಿಕ ಪ್ರತಿಭಟನೆಯು ಕಾನೂನುಬಾಹಿರವಾಗಿರುತ್ತದೆ ಎಂದು ವಾದಿಸಿದರು. ವಾದ ಆಲಿಸಿದ ಪೀಠ, ಆರು ವಾರಗಳಲ್ಲಿ ಉತ್ತರಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ ಪ್ರಕರಣದ ಮುಂದಿನ ವಿಚಾರಣೆಗೆ ತಡೆ ನೀಡಿತು. ಇದೇ ವೇಳೆ ಅರ್ಜಿದಾರರಿಗೆ ತಲಾ 10,000 ರೂ.ಗಳ ವೆಚ್ಚವನ್ನು ವಿಧಿಸಿದ ಕರ್ನಾಟಕ ಹೈಕೋರ್ಟ್ನ ಆದೇಶಕ್ಕೂ ತಡೆ ನೀಡಿತು. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಿಂದಾಗಿ ಫೆ.26 ರಂದು ಕೋರ್ಟ್ ಹಾಜರಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.