ನವದೆಹಲಿ: ನಟ ದರ್ಶನ್ ಜಾಮೀನು ರದ್ದು ಕೋರಿ ಪೊಲೀಸರ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಿತು. ನಟ ದರ್ಶನ್, ಪವಿತ್ರಾಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವಕೀಲ ಅನಿಲ್ ನಿಶಾನಿ ಮುಖಾಂತರ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಇದೀಗ ಪ್ರಾಸಿಕ್ಯೂಷನ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದಿ ಮಂಡಿಸಿದರು. ಹೈಕೋರ್ಟ್ ನೀಡಿರುವ ಜಾಮೀನು ತೀರ್ಪನ್ನು ಬೇರೆಯವರು ಬಳಕೆ ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ಗೆ ಕಾರಣ ಕೊಟ್ಟರು. ಆದರೆ, ಸುಪ್ರೀಂ ಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಲಾಗದು ಎಂದು ಹೇಳಿ ಎಲ್ಲಾ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತು. ಬೇರೆ ಆರೋಪಿಗಳು ಜಾಮೀನು ಕೋರಿದರೆ ಹೈಕೋರ್ಟ್ನ ಆದೇಶವನ್ನು ಆಧರಿಸಬಾರದು ಎಂದು ಹೇಳಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಗಳಿಗೆ ಡಿಸೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಕೋರ್ಟ್ನ ತೀರ್ಮಾನಕ್ಕೆ ಬೆಂಗಳೂರು ಪೊಲೀಸರು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿ ಅಗತ್ಯ ಸಿದ್ಧತೆ ಮಾಡಿಕೊಂಡು ಸುಪ್ರೀಂ ಕೋರ್ಟ್ಗೆ ಜನವರಿ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸಿದ್ದರು. ಸರ್ಕಾರವು ವಕೀಲರನ್ನು ನೇಮಕ ಮಾಡಿತ್ತು. ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೆ ಕೂಡಲೇ ಬಂಧನವಾಗಿ ಮತ್ತೆ ಜೈಲು ಸೇರಬೇಕಾಗುತ್ತದೆ. ಹೀಗಾಗಿ, ನಟ ದರ್ಶನ್ ಹಾಗೂ ಅಭಿಮಾನಿಗಳು ಸುಪ್ರೀಂ ಕೋರ್ಟ್ ವಿಚಾರಣೆ ಮೇಲೆ ನಿಗಾ ಇಟ್ಟಿದ್ದಾರೆ.