ನವದೆಹಲಿ: 2024ನೇ ಸಾಲಿನ ನೀಟ್-ಯುಜಿ ಪರೀಕ್ಷಾ ಫಲಿತಾಂಶವನ್ನು ಜುಲೈ 20ರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.
ಯಾವುದೇ ಕಾರಣಕ್ಕೂ ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸದೇ ನಗರವಾರು ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸುವಂತೆ ಎನ್ಟಿಎಗೆ ಆದೇಶಿಸಿದೆ.
ನೀಟ್-ಯುಜಿ ಮರುಪರೀಕ್ಷೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೇ ಮಾತ್ರ ಮರುಪರೀಕ್ಷೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿತ್ತು. ವಿಚಾರಣೆ ವೇಳೆ ಕೋರ್ಟ್ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಬಿಹಾರ ಪೊಲೀಸರಿಂದ ವರದಿ ಕೇಳಿತ್ತು.
ಬಿಹಾರ ಪೊಲೀಸರು ಈ ಕೇಸ್ನಲ್ಲಿ ಮೊದಲ ಪ್ರಕರಣ ದಾಖಲಿಸಿದ್ದರು. ನಂತರ ಇದು ಜಾರ್ಖಂಡ್, ಗುಜರಾತ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ರಾಷ್ಟ್ರೀಯ ʻಸಾಲ್ವರ್ ಗ್ಯಾಂಗ್ʼ ನೊಂದಿಗೆ ಸಂಪರ್ಕ ಹೊಂದಿದೆ ಎಂಬುದು ಬೆಳಕಿಗೆ ಬಂದಿತ್ತು.
ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಬೇಕೆಂಬ ಆದೇಶವನ್ನು ಎನ್ಟಿಎ ವಿರೋಧಿಸಿತ್ತು. ಪರೀಕ್ಷಾ ಏಜೆನ್ಸಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪರೀಕ್ಷಾ ಫಲಿತಾಂಶಗಳು ವಿದ್ಯಾರ್ಥಿಗಳ ಖಾಸಗಿ ಆಸ್ತಿ ಎಂಬ ಕಾರಣಕ್ಕಾಗಿ ವಿನಂತಿ ವಿರೋಧಿಸಿದರು. ಇಡೀ ಫಲಿತಾಂಶ ಎಂದಿಗೂ ಪ್ರಕಟಿಸಲಾಗದು, ಅವು ವಿದ್ಯಾರ್ಥಿಗಳ ಆಸ್ತಿ ಎಂದು ವಾದಿಸಿದ್ದರು.
ಏಜೆನ್ಸಿಯ ಪರ ವಾದವನ್ನು ಕೋರ್ಟ್ ತಳ್ಳಿಹಾಕಿತ್ತು. ವಾಸ್ತವವೆಂದರೆ ಬಿಹಾರದ ಪಾಟ್ನಾದಲ್ಲಿ, ಜಾರ್ಖಂಡ್ನ ಹಜಾರಿಬಾಗ್ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಇದು ಆ ಕೇಂದ್ರಗಳಿಗೆ ಮಾತ್ರವೇ ಸೀಮಿತವಾಗಿಯೇ ಎಂಬುದನ್ನು ಪತ್ತೆಹಚ್ಚಲು ನಾವು ಬಯಸುತ್ತೇವೆ. ಆದ್ರೆ, ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶ ತಿಳಿಯದೇ ಕಂಗಾಲಾಗಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ನಗರವಾರು ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳ ಗುರುತನ್ನು ಮರೆಮಾಚಲು ನಾವು ಬಯಸುತ್ತೇವೆ. ಇದರಿಂದ ಕೇಂದ್ರವಾರು ಮಾರ್ಕ್ ಪ್ಯಾಟರ್ನ್ ಏನೆಂಬುದೂ ತಿಳಿಯುತ್ತದೆ ಎಂದು ಕೋರ್ಟ್ ವಿವರಿಸಿತು.