ಬೆಂಗಳೂರು ;- ಸರ್ಜನ್ಗಳ ಸೇವೆ ಅಳತೆಗೂ ಮೀರಿದ್ದು ಎಂದು ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಹಾಗೂ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಶಸ್ತ್ರಚಿಕಿತ್ಸಕರ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಜನ್ಗಳು ಶಸ್ತ್ರಚಿಕಿತ್ಸೆ ನಡೆಸುವಾಗ ಜೀವನದಲ್ಲಿ ಒಮ್ಮೆ ಮಾತ್ರ ನೋವು ನೀಡುತ್ತಾರೆ. ಆದರೆ ಜೀವನ ಪರ್ಯಂತ ನಗು ನಗುತಾ ಬದುಕು ಸಾಗಿಸುವಂತೆ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಶಸ್ತ್ರಚಿಕಿತ್ಸಕರು ಮಾನವ ರೂಪದ ದೇವರು ಎಂದರು.
ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಕೆ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಸಣ್ಣ ಸಣ್ಣ ವಿಚಾರಗಳು ಸಹ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್ ಆಗುತ್ತಿವೆ. ವೈದ್ಯಕೀಯ ಕಾನೂನು ರೂಪಿಸುವ ಮುನ್ನ ವೈದ್ಯಕೀಯ ಸಮೂಹದ ಅಭಿಪ್ರಾಯ ಪಡೆಯಬೇಕು. ಇಲ್ಲವಾದಲ್ಲಿ ಕಾನೂನು ನಿರುಪಯುಕ್ತವಾಗಿದೆ ಎಂದರು.
ಈ ವೇಳೆ ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಅಧ್ಯಕ್ಷ ಡಾ. ಹೆಚ್. ವಿ ಶಿವರಾಮ್, ಖಜಾಂಚಿ ಡಾ. ರಾಜಶೇಖರ್ ಸಿ ಜಕ್ಕಾ, ಡಾ. ಕೆ. ಎಲ್. ವೆಂಕಟೇಶ್, ಡಾ. ಮನೀಶ ಜೋಶಿ ಮತ್ತಿತರರು ಉಪಸ್ಥಿತರಿದ್ದರು.