ಅಮರಾವತಿ: ಟೀಂ ಇಂಡಿಯಾದ (Team India) ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಆಂಧ್ರಪ್ರದೇಶದ ತಿರುಪತಿ ತಿರುಮಲ ಬೆಟ್ಟಕ್ಕೆ ತೆರಳಿ ವೆಂಕಟೇಶ್ವರನ (Tirumala Venkateswara Temple) ದರ್ಶನ ಪಡೆದಿದ್ದಾರೆ.
ಸೂರ್ಯಕುಮಾರ್ ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಈ ಹಿಂದೆ ಭಾರತ ತಂಡ ತಿರುವನಂತಪುರಂಗೆ ಹೋದಾಗ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೂ ಸೂರ್ಯಕುಮಾರ್ ಯಾದವ್ ಕೆಲವು ಕ್ರಿಕೆಟಿಗರೊಂದಿಗೆ ತೆರಳಿ, ಪೂಜೆ ಸಲ್ಲಿಸಿದ್ದರು. ಇದೀಗ ಕ್ರಿಕೆಟ್ ಬಿಡುವಿನ ವೇಳೆಯಲ್ಲಿ ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದೇವರ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.
ತಿರುಪತಿ ತಿಮ್ಮಪ್ಪ ಎಂದೇ ಪ್ರಖ್ಯಾತವಾಗಿರುವ ಬಾಲಾಜಿಯ ದರ್ಶನ ಪಡೆದ ನಂತರ ತಿರುಮಲದ ರಂಗನಾಯಕ ಮಂಟಪದಲ್ಲಿ ವೈದಿಕರು ಆಶೀರ್ವಚನ ನೀಡಿದರು. ದೇಗುಲದ ಅಧಿಕಾರಿಗಳು ಸೂರ್ಯಕುಮಾರ್ ಯಾದವ್ ದಂಪತಿಗೆ ತೀರ್ಥ ಪ್ರಸಾದ ನೀಡಿದರು. ಜೊತೆಗೆ ಸೂರ್ಯನಿಗೆ ರೇಷ್ಮೆ ವಸ್ತ್ರ ನೀಡಿ ಆಶೀರ್ವದಿಸಿದರು.
ದೇವರ ದರ್ಶನ ಪಡೆದು ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಸೂರ್ಯಕುಮಾರ್ ಯಾದವ್ ಮೇಲೆ ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಂಡರು.